ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಜಾಗ ಒಳಗೆ ಹಾಕಿದವರು ಮತ್ತು ದೇವಸ್ಥಾನಕ್ಕಾಗಿ ಒಂದು ರೂಪಾಯಿ ಕೊಡದವರು ಇಂದು, ದೇವಸ್ಥಾನದಲ್ಲಿ ಅಕ್ರಮ ಆಗಿದೆ ಎಂದು ಹೇಳಿಕೊಂಡು ಪ್ರತಿಭಟನೆ ಮಾಡಿದ್ದಾರೆ. ಇಂಥವರಿಗೆ ಏನು ಹೇಳಬೇಕು, ಎಂಥಾ ಕಾಲ ಬಂತು ಎಂದು ಶಾಸಕ ಅಶೋಕ್ ರೈ ಹೇಳಿದರು.
ಮಂಗಳವಾರ ಪುತ್ತೂರಿನಲ್ಲಿ ಬಿಜೆಪಿ ದೇವಸ್ಥಾನ ವಿಚಾರದಲ್ಲಿ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವಳದ ಜಾಗ ಒಳಗೆ ಹಾಕಿದವರು, ದೇವಸ್ಥಾನಕ್ಕಾಗಿ ಒಂದು ರೂಪಾಯಿ ಕೊಡದವರು ಎಲ್ಲ ಸೇರಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. 60 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಅಭಿವೃದ್ಧಿ ಮಾಡುತ್ತಿರುವವರು ನಾವು ಸ್ವಾಮಿ. ನಾನು ನನ್ನ ಶಾಸಕ ನಿಧಿ ಯಿಂದಲೂ 10 ಕೋಟಿ ನೀಡಿದ್ದೇನೆ.
ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ನಡೆಸಿದ ಕ್ಯಾಬಿನೆಟ್‌ನಲ್ಲಿ ಇನ್ನೂ 5 ಕೋಟಿ ರೂ. ಪುತ್ತೂರು ದೇವಳಕ್ಕೆ ಮಂಜೂರು ಮಾಡಿಸಿದ್ದೇನೆ. ನಾನು ವೈಯಕ್ತಿಕವಾಗಿ ನನ್ನ ದುಡಿದ ಹಣದಿಂದ 1 ಕೋಟಿ ರೂ. ದೇಣಿಗೆ ದೇವಸ್ಥಾನಕ್ಕೆ ನೀಡುತ್ತೇನೆ.
ನನ್ನ ಸಂಪಾದನೆಯ ದುಡ್ಡಿನಿಂದ 50 ಗ್ರಾಂ ಚಿನ್ನ ಕೊಡುವುದಾಗಿ ಹೇಳಿದ್ದೆ ಆ ಬಳಿಕ 100 ಗ್ರಾಂ ಚಿನ್ನ ದೇವಳಕ್ಕೆ ನೀಡಿದ್ದೇನೆ.
ಅಲ್ಲಿ ಅಕ್ರಮ ಮಾಡಬೇಕಿದ್ದರೆ ನಾನು ಇಷ್ಟೊಂದು ದುಡ್ಡು ಕಿಸೆಯಿಂದ ನೀಡಬೇಕಿತ್ತಾ? ದುಡ್ಡು ಒಳಗೆ ಹಾಕುತ್ತಾ ಕೂರಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ಪುತ್ತೂರು ದೇವಸ್ಥಾನಕ್ಕೆ ಸೇರಿದ 18 ಎಕರೆ ಜಾಗವನ್ನು ನಾವು ಬಿಡಿಸಿದ್ದು ಸ್ವಾಮಿ. ಮೊದಲು ಇದ್ದವರಿಗೆ ಇದೆಲ್ಲ ಯಾಕೆ ಆಗಲಿಲ್ಲ? ಯಾಕೆ ಇವರಿಗೆ ಧಮ್ಮಿರಲಿಲ್ವಾ? ಇದಕ್ಕೆಲ್ಲ ಅಶೋಕ್ ರೈ ಬರಬೇಕಾಯಿತಾ? ನಾನು ಕೆರಳುವುದಿಲ್ಲ ಎಂದುಕೊಂಡಿದ್ದೆ. ಆದರೆ ನಾನು ಕೆರಳಿದರೆ ಎಲ್ಲ ವಾಂತಿ ಮಾಡಿ ಬಿಡುತ್ತೇನೆ.
ಇನ್ನು ಬಿಡುವುದಿಲ್ಲ. ಯಾರೆಲ್ಲ, ಎಲ್ಲೆಲ್ಲ ದೇವಸ್ಥಾನಗಳ ಜಾಗ ಒಳಗೆ ಹಾಕಿಕೊಂಡಿದ್ದಾರಾ ಅದನ್ನೆಲ್ಲ ಬಿಡಿಸಿಕೊಳ್ಳುತ್ತೇವೆ. ದೇವಸ್ಥಾನಕ್ಕೆ ಒಂದು ರೂಪಾಯಿ ಕೊಡಲಾಗದವರು, ದೇವರ ಜಾಗ ಒಳಗೆ ಹಾಕಿದವರೆಲ್ಲ ಸೇರಿಕೊಂಡು ಪ್ರತಿಭಟನೆ ಮಾಡುವುದಂತೆ. ಇದಕ್ಕೆಲ್ಲ ಹೋಗುವ ಜನರಿಗೂ ಬುದ್ಧಿ ಬೇಕಲ್ವಾ ಎಂದು ಶಾಸಕರು ಪ್ರಶ್ನಿಸಿದರು.



























