ಪುತ್ತೂರು: ಸಕ್ಕರೆ ಕಾಯಿಲೆಗೆ ಸಂಬಂಧಿಸಿ ಕೂರ್ನಡ್ಕದ ಮಹಿಳೆಯೊಬ್ಬರಿಗೆ ಸರಕಾರಿ ಆಸ್ಪತ್ರೆಯಲ್ಲಿ ನೀಡಲಾದ ಮಾತ್ರೆಗಳು ಅವಧಿ ಮೀರಿದ್ದಾಗಿದೆ ಎಂದು ಎಸ್‌ಡಿಪಿಐ ಮುಖಂಡ ತಾಜುದ್ದೀನ್ ಎಂಬವರು ಆರೋಪಿಸಿದ್ದು,ಈ ” ಬಗ್ಗೆ ಮಹಿಳೆಯ ಸಂಬಂಧಿಕರು ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ತನಿಖೆ ನಡೆಸುವ ಭರವಸೆಯನ್ನು ವೈದ್ಯಾಧಿಕಾರಿಗಳು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕೂರ್ನಡ್ಕದ ಮಹಿಳೆ ಸೆ.16 ರಂದು, ಮಧುಮೇಹಕ್ಕೆ ಸಂಬಂಧಿಸಿದ ಔಷಧಿಗಳನ್ನು ಪಡೆದುಕೊಳ್ಳಲೆಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು.ಮಹಿಳೆಯನ್ನು ಪರೀಕ್ಷಿಸಿದ ಬಳಿಕ ಅವರಿಗೆ, ಮಧುಮೇಹಕ್ಕೆ ಸಂಬಂಧಿಸಿದ ಮಾತ್ರೆಯ ಜೊತೆಗೆ ಇತರ ಮಾತ್ರೆಗಳನ್ನು ನೀಡಿದ್ದರು. ಆದರೆ ಮಾತ್ರೆಗಳೆಲ್ಲವೂ ಅವಧಿ – ಮೀರಿದ ಮಾತ್ರೆಗಳಾಗಿದ್ದು, ಆಗಸ್ಟ್ ತಿಂಗಳಿನಲ್ಲೇ ಇವುಗಳ ಬಳಕೆಯ ಅವಧಿ ಮುಗಿದಿತ್ತು.
ಈ ಬಗ್ಗೆ ಅರಿವಿಲ್ಲದ ಮಹಿಳೆ ಆದೇ ಮಾತ್ರೆಗಳನ್ನು ಹತ್ತು ದಿನಗಳ ಕಾಲ ನುಂಗಿದ್ದರು. ಎರಡು ದಿನಗಳ ಹಿಂದೆ ಅವರು ಆರೋಗ್ಯದಲ್ಲಿ ಕೊಂಚ ಏರುಪೇರಾಗಿರೋದನ್ನು ಗಮನಿಸಿದ ಮನೆ ಮಂದಿ, ಆಕೆಗೆ ನೀಡಲಾಗಿದ್ದ ಮಾತ್ರೆಗಳನ್ನು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಾತ್ರೆಗಳು ಅವಧಿ ಮೀರಿದ್ದ ಮಾಹಿತಿ ದೊರೆತಿದೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮಾತ್ರೆಗಳ ವಿತರಣೆಯಲ್ಲಿ ಲೋಪ ಎಸಗಿದೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ತಾಜುದ್ದೀನ್ ಅವರು ತಿಳಿಸಿದ್ದಾರೆ.
ಸೂಕ್ತ ವಿಚಾರಣೆ- ವೈದ್ಯಾಧಿಕಾರಿ ಸ್ಪಷ್ಟನೆ:
ಅವಧಿ ಮೀರಿದ ಮಾತ್ರೆ ನೀಡಲಾಗಿದೆ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಸಾಮಾನ್ಯವಾಗಿ ಮಾತ್ರೆಗಳ ಅವಧಿ ಮುಗಿಯುವ ಒಂದು ತಿಂಗಳ ಮೊದಲೇ ಮಾತ್ರೆಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಅಲ್ಲದೆ ಅವಧಿ ಮೀರುವ ಸಮಯವನ್ನು ರೋಗಿಗಳಿಗೆ ತಿಳಿಸಿ,ಅವಧಿ ಮುಗಿಯುವ ಒಳಗೆ ಮಾತ್ರೆಗಳನ್ನು ಉಪಯೋಗಿಸುವಂತೆ ಸೂಚನೆಯನ್ನೂ ನೀಡಲಾಗುತ್ತದೆ.
ಆದರೆ ಈ ರೀತಿಯ ಘಟನೆಗೆ ಕಾರಣಗಳೇನು ಎನ್ನುವುದರ ಬಗ್ಗೆ ಸೂಕ್ತ ವಿಚಾರಣೆ ನಡೆಸಿದ ಬಳಿಕ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನೀಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ಸಂಬಂಧಿಸಿದ ರೋಗಿಯು ಪ್ರತಿ ತಿಂಗಳು ಮಾತ್ರೆ ಕೊಂಡುಹೋಗುತ್ತಾರೆ. ಆದರೆ ಅದರ ದೂರಿನ ಹಿನ್ನೆಲೆಯಲ್ಲಿ ನಿನ್ನೆ ಅವರ ಆರೋಗ್ಯ ಪರೀಕ್ಷೆಮಾಡಿದ್ದೇನೆ. ಶುಗರ್ ಎಲ್ಲಾ ಸರಿಯಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಡಾ.ಯದುರಾಜ್ ಸ್ಪಷ್ಟಪಡಿಸಿದ್ದಾರೆ.



























