ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ನೇಮಕಾತಿ-2026ರ ದೈಹಿಕ ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆಗೆ ನಕಲಿ ದಾಖಲೆ ಹಾಜರುಪಡಿಸಿದ ಆರೋಪದಡಿ ಅಭ್ಯರ್ಥಿಯೊಬ್ಬರ ವಿರುದ್ಧ ದೂರು ದಾಖಲಾಗಿದೆ.
ಸೆ.28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನೇಮಕಾತಿ ಪ್ರಕ್ರಿಯೆಯ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಕಡಬ ಕೋಡಿಂಬಾಳದ ಯಜ್ಞೇಶ್ ಬಿ.ಜೆ. ರೈ ಎಂಬವರು CPC5225446 ಸಂಖ್ಯೆಯ ಕರೆಪತ್ರವನ್ನು ಹಾಜರುಪಡಿಸಿ ಪರೀಕ್ಷೆಯಲ್ಲಿ ಭಾಗವಹಿಸಲು ನೋಂದಣಿಗೆ ಮುಂದಾಗಿದ್ದರು.
ನೋಂದಣಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಕರೆಪತ್ರದಲ್ಲಿನ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒದಗಿಸಿರುವ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಅಭ್ಯರ್ಥಿಯ ವಿವರಗಳು ಪತ್ತೆಯಾಗಿಲ್ಲ. ಅಲ್ಲದೆ, ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ನೇಮಕಾತಿ-2026ರ 1:5 ಪಟ್ಟಿಯಲ್ಲಿಯೂ ಅಭ್ಯರ್ಥಿಯ ಹೆಸರು, ಕ್ರಮ ಸಂಖ್ಯೆ ಅಥವಾ ಅರ್ಜಿ ಸಂಖ್ಯೆ ಕಂಡುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯನ್ನು ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ. ಅವರು ಹಾಜರುಪಡಿಸಿದ ಕರೆಪತ್ರ ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದಾಗ ಅವು ಮೇಲ್ನೋಟಕ್ಕೆ ನಕಲಿ ದಾಖಲೆಗಳಂತೆ ಕಂಡುಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾಜರುಪಡಿಸಿರುವ ಆರೋಪದಡಿ ಯಜ್ಞೇಶ್ ಬಿ.ಜೆ. ರೈ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.ಈ ಬಗ್ಗೆ ಮಂಗಳೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























