ಬಿಜೆಪಿಯ ಹಿರಿಯ ನಾಯಕ, ರಾಜ್ಯದ ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಜಯನಗರದಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ರಾತ್ರಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿ ಮೃತರಾಗಿದ್ದಾರೆ. ಅವರ ಅಗಲಿಕೆಗೆ ರಾಜ್ಯ ರಾಜಕೀಯ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಕಳೆದ ಕೆಲ ಕಾಲದಿಂದ ಬ್ರೈನ್ ಟ್ಯೂಮರ್ ಸಮಸ್ಯೆ ಹಾಗೂ ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಜಯನಗರದ ಮಗಳ ನಿವಾಸದಲ್ಲಿ ವಾಸವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರದಲ್ಲಿ 2021 ರಿಂದ 2023 ರವರೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಾರ್ಥಿವ ಶರೀರವನ್ನು ಇಂದು ರಾತ್ರಿಯೇ ಬೆಂಗಳೂರಿನಿಂದ ಸ್ವಕ್ಷೇತ್ರ ತಿಪಟೂರಿಗೆ ರವಾನಿಸಲಾಗುತ್ತಿದ್ದು, ನಾಳೆ (ಆಗಸ್ಟ್ 19) ಸಾರ್ವಜನಿಕ ದರ್ಶನದ ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.




























