ಪುತ್ತೂರು: ಕೆಲ ದಿನಗಳ ಹಿಂದೆ ದರ್ಬೆಯಲ್ಲಿ ನಡೆದ ಗಲಾಟೆ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆಯೊಡ್ಡಿದ್ದ ಪ್ರಕರಣದ ಹತ್ತು ಮಂದಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ದರ್ಬೆಯ ಜೆರಾಕ್ಸ್ ಅಂಗಡಿಯೊಂದರಲ್ಲಿ ಲ್ಯಾಮಿನೇಶನ್ ಮಾಡಲೆಂದು ನೀಡಿದ್ದ ದಾಖಲೆ ಪತ್ರವೊಂದಕ್ಕೆ ಹಾನಿ ವಿಚಾರದಲ್ಲಿ ಗ್ರಾಹಕರು ಮತ್ತು ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ನಡೆದ ಸಂದರ್ಭ ಅಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ,ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಅಬ್ದುಲ್ ನಿಯಾಝ್ ಪೆರ್ನೆ(26ವ.),ಮೊಹಮ್ಮದ್ ನೌಷಾದ್ ತಾರಿಗುಡ್ಡೆ(32ವ), ಆದಂ ಕೋಲ್ಪೆ(45ವ), ಮೊಹಮ್ಮದ್ ಸುಹೈಲ್ ಬಿ.ಭಕ್ತಕೋಡಿ(28ವ.), ಅಬ್ದುಲ್ ಖಾದರ್ ಜಾಬೀರ್ ಬನ್ನೂರು(30ವ.), ಅಬ್ದುಲ್ ಕರೀಂ ಒಳಮೊಗ್ರು ಕುಂಬ್ರ (39ವ.), ಯಾಕೂಬ್ ಅಂಗಡಿಮಜಲು(47ವ.),ಇಮ್ರಾನ್ ಅಹಮ್ಮದ್ ಅಲಂಗುರಡ್ಕ(40.ವ), ಮೊಹಮ್ಮದ್ ರಿಫಾಜ್ ಕೂರ್ನಡ್ಕ(22ವ.), ಮೊಹಮ್ಮದ್ ಇರ್ಷಾದ್ ಜೆ.ಜಾರತ್ತಾರ್ (40ವ.)ಎಂಬವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿಗಳ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.





























