ಕಡಬ: ತಾಲೂಕಿನ ಎಡಮಂಗಲ ಗ್ರಾಮದ ಬೇಕರಿ ಉದ್ಯಮಿ ಮೋಹನ್ ನಾಯ್ಕ ದಡ್ಡುರ ಅವರು ಮೆದುಳಿನ ರಕ್ತಸ್ರಾವದಿಂದ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಎಡಮಂಗಲದಲ್ಲಿ ಬೇಕರಿ ನಡೆಸುತ್ತಿದ್ದ ಮೋಹನ್ ನಾಯ್ಕ ಅವರು ಸೆ. 6ರಂದು ಸಿದ್ಧಪಡಿಸಿದ್ದ ಪಪ್ಸ್‌ಗಳನ್ನು ಸರಬರಾಜು ಮಾಡಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ರಕ್ತದೊತ್ತಡ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವ (ಬ್ರೈನ್ ಹ್ಯಾಮರೇಜ್) ಸಂಭವಿಸಿದೆ ಎನ್ನಲಾಗಿದೆ.
ತಕ್ಷಣ ಅವರನ್ನು ಕಡಬ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಪುತ್ರಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.





























