ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ಆಗಸ್ಟ್ 28ರಂದು ನಡೆದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಖರ್ಚು-ವೆಚ್ಚಗಳ ಲೆಕ್ಕಪತ್ರ ಮಂಡನಾ ಸಭೆ ಹಾಗೂ ಸೀತಾ ಪರಿವಾರದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಅಭಿನಂದನಾ ಸಭೆ ಸೆ. 7ರಂದು ಸುಭದ್ರ ಸಭಾಂಗಣದಲ್ಲಿ ನಡೆಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ವೀಣಾ ಬಲ್ಲಾಳ್ ವಹಿಸಿದ್ದರು. ಕಾರ್ಯಕ್ರಮದ ಖರ್ಚು-ವೆಚ್ಚಗಳ ವಿವರವನ್ನು ಕೋಶಾಧಿಕಾರಿ ಪ್ರಜ್ವಲ್ ಘಾಟೆ ಮಂಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಪುತ್ತೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮಗಳಿಗಿಂತಲೂ ಮೂರನೇ ವರ್ಷದ ಪೂಜಾ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಹಾಗೂ ವ್ಯವಸ್ಥಿತವಾಗಿ ನೆರವೇರಿದೆ ಎಂದು ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಎಲ್ಲಾ ತಾಯಂದಿರಿಗೆ ಪ್ರಸಾದ ರೂಪದಲ್ಲಿ ಸೀರೆ, ಅರಿಶಿನ-ಕುಂಕುಮ, ಬಳೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ವ್ಯವಸ್ಥಿತವಾಗಿ ವಿತರಿಸಲಾಯಿತು. ಸಾವಿರಾರು ಭಗವದ್ಭಕ್ತರಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಲೆಕ್ಕಪತ್ರ ಮಂಡನೆಯ ಬಳಿಕ ಕಾರ್ಯಕ್ರಮದಲ್ಲಿ ಉಳಿಕೆಯಾದ ಹಣವನ್ನು ಮಹಿಳಾ ಸಮಿತಿಯ ಪದಾಧಿಕಾರಿಗಳು ಟ್ರಸ್ಟ್‌ನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಸೀತಾ ಪರಿವಾರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ.!
ಸಭೆಯ ಬಳಿಕ ಸೀತಾ ಪರಿವಾರದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ಮಲ್ಲಿಕಾ ಪ್ರಸಾದ್, ಅಧ್ಯಕ್ಷರಾಗಿ ಪ್ರೇಮ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರೇಮಾ ಮುಂಡೂರು ಹಾಗೂ ಅನ್ನಪೂರ್ಣ ಸಿ. ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸ್ಮಿತಾ ನಾಯ್ಕ್, ವೀಣಾ ಬಲ್ಲಾಳ್, ಪುಷ್ಪ ರಾಜೇಶ್, ರಜತಾ ಗಿರೀಶ್ ಭಟ್ ಹಾಗೂ ವೀಣಾ ಪರ್ಲಡ್ಕ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಪವಿತ್ರ ದೊಡ್ಡಡ್ಕ, ಸ್ವಯಂ ಪ್ರಭಾ, ಪುಷ್ಪ ಆಚಾರ್, ಸುಲೋಚನಾ ಹಾಗೂ ಅನ್ನಪೂರ್ಣೇಶ್ವರಿ ಬಲ್ಲಾಳ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದೇ ವೇಳೆ 55ಕ್ಕೂ ಹೆಚ್ಚು ಮಹಿಳೆಯರನ್ನು ಸೀತಾ ಪರಿವಾರದ ಸದಸ್ಯರಾಗಿ ನೇಮಕ ಮಾಡಲಾಯಿತು. ನೂತನ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.





























