ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ., ಬಿ.ಸಿ.ರೋಡು ಇದರ ಸುಳ್ಯ ಶಾಖೆಯ ಉದ್ಘಾಟನಾ ಸಮಾರಂಭ ಸೆ.13ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಸುಳ್ಯದ ಗಾಂಧೀನಗರದ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥೀ ಮುರುಳ್ಯ ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸುವರು.
ಮಾಜಿ ಸಚಿವ ಬಿ. ರಮಾನಾಥ ರೈ ಭದ್ರತಾ ಕೋಶವನ್ನು ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಕಂಪ್ಯೂಟರ್ ವ್ಯವಸ್ಥೆಯನ್ನು ಉದ್ಘಾಟಿಸುವರು. ಕೆವಿಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೆ.ವಿ. ಚಿದಾನಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ.ಪಿ. ಜೋನಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ಸುಳ್ಯ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್, ಅಜ್ಜಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಪೂಜಾರಿ ಪಿ.ಕೆ., ಸುಳ್ಯ ತಾಲೂಕು ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯ ತಾಲೂಕು ಬಿಎಂಎಸ್ ಅಧ್ಯಕ್ಷ ಪ್ರಕಾಶ್ ಎಂ.ಎಸ್. ಹಾಗೂ ಆರ್.ಕೆ. ಕಾಂಪ್ಲೆಕ್ಸ್ ಮಾಲಕ ರಾಮಕೃಷ್ಣ ರೈ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.
1953ರಲ್ಲಿ ಸ್ಥಾಪನೆ
ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲವು 1953ರಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಂತೆ ‘ದ.ಕ. ಜಿಲ್ಲಾ ತಾಳೆ ಮತ್ತು ತೆಂಗು ಬೆಲ್ಲ ಮಾರಾಟ ಸಂಯುಕ್ತ ಸಂಘ’ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ದಿ. ದಾಮೋದರ ಆರ್. ಸುವರ್ಣ ಅವರ ನಾಯಕತ್ವದಲ್ಲಿ 130 ತಾಳೆಬೆಲ್ಲ ಪ್ರಾಥಮಿಕ ಸಹಕಾರಿ ಸಂಘಗಳ ಸದಸ್ಯತ್ವದೊಂದಿಗೆ 9 ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿ ಸಂಘ ಸ್ಥಾಪನೆಯಾಗಿತ್ತು.
ಮೂರ್ತೆಗಾರಿಕೆಯನ್ನು ನಿಷೇಧಿಸುವ ಸಂದರ್ಭ ಎದುರಾದಾಗ ಕೋಟ ಶ್ರೀನಿವಾಸ ಪೂಜಾರಿ, ಶ್ರೀಧರ್ ಕಲ್ಯಾಡಿ ಸೇರಿದಂತೆ ರಾಜಕೀಯ ಹಾಗೂ ಬಿಲ್ಲವ ಪ್ರಮುಖರ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1991ರಲ್ಲಿ ಶೇಂದಿ ಉತ್ಪಾದನೆ ಮತ್ತು ಮಾರಾಟಕ್ಕೆ ಸಹಕಾರಿ ಸಂಘಗಳ ಮೂಲಕ ಅವಕಾಶ ದೊರೆಯಿತು. ಬಳಿಕ 2007-08ನೇ ಸಾಲಿನಲ್ಲಿ ಅಬಕಾರಿ ಕಾಯ್ದೆಯಡಿ ಅನುಮತಿ ದೊರೆಯಿತು.
ಪಿ.ಕೆ. ಸದಾನಂದ ಅವರ ಅಧ್ಯಕ್ಷತೆಯಲ್ಲಿ ಮೂರ್ತೆದಾರರ ಸಹಕಾರಿ ಸಂಘಕ್ಕೆ ಹೊಸ ಚೈತನ್ಯ ದೊರೆತು, ಮುಂದೆ ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲವಾಗಿ ಪರಿವರ್ತನೆಯಾಯಿತು. ಉಡುಪಿ ಜಿಲ್ಲೆಯಲ್ಲಿ 16 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಸೇರಿದಂತೆ ಒಟ್ಟು 43 ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳು ಸ್ಥಾಪನೆಯಾದವು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ವಿಭಜನೆಯಾದ ಬಳಿಕ ಪ್ರತ್ಯೇಕ ಮಹಾಮಂಡಲಗಳು ಅಸ್ತಿತ್ವಕ್ಕೆ ಬಂದವು. ದ.ಕ. ಜಿಲ್ಲೆಯ ಪ್ರಥಮ ಅಧ್ಯಕ್ಷರಾಗಿ *ಕೆ. ನಾರಾಯಣ, ಬಳಿಕ *ವಿಜಯ ಕುಮಾರ್ ಸೊರಕೆ ಸೇರಿದಂತೆ ದಾಮೋದರ ಆರ್. ಸುವರ್ಣ, ಗಂಗಾಧರ ವಾಸ್, ನವೀನ್ ಡಿ. ಸುವರ್ಣ, ಪ್ರಭಾಕರ ಬಂಗೇರ, ಪಿ.ಕೆ. ಸದಾನಂದ ಹಾಗೂ ವಿಜಯ ಕುಮಾರ್ ಸೊರಕೆ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ.
₹45 ಕೋಟಿ ವ್ಯವಹಾರ
ಕಳೆದ ವರದಿ ವರ್ಷದ ಅಂತ್ಯಕ್ಕೆ ಮಹಾಮಂಡಲದಲ್ಲಿ 31 ‘ಎ’ ವರ್ಗದ ಮೂರ್ತೆದಾರರ ಸಹಕಾರಿ ಸಂಘಗಳು, 1,800 ‘ಏ’ ವರ್ಗದ ಸದಸ್ಯರು ಹಾಗೂ ‘ಸಿ’ ಮತ್ತು ‘ಇ’ ವರ್ಗದ 1,197 ಸದಸ್ಯರಿದ್ದಾರೆ. ವರದಿ ಸಾಲಿನಲ್ಲಿ ಮಹಾಮಂಡಲವು ₹45 ಕೋಟಿ ವ್ಯವಹಾರ ನಡೆಸಿ ₹11.44 ಲಕ್ಷ ಲಾಭ ಗಳಿಸಿದೆ. ಸಂಸ್ಥೆಯು ₹13 ಕೋಟಿ ಠೇವಣಿ ಹೊಂದಿದ್ದು, ಒಟ್ಟು ₹7,00,31,874 ಸಾಲ ವಿತರಿಸಿದೆ.
ಮೂರ್ತೆದಾರರ ಅಭಿವೃದ್ಧಿಗೆ ಆದ್ಯತೆ
ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅವರು ಸಂಘದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಉದ್ಯಮಿ, ಜನಸ್ನೇಹಿ ರಾಜಕಾರಣಿ, ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳು, ಶೈಕ್ಷಣಿಕ ಪ್ರೋತ್ಸಾಹಕ ಮತ್ತು ಸಹಕಾರಿ ಧುರೀಣರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಜಿಲ್ಲೆಯ ಪ್ರಮುಖ ಸಹಕಾರಿ ಸಂಸ್ಥೆಗಳಾದ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಹಾಗೂ ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಾಮಂಡಲದ ಕಾರ್ಯವ್ಯಾಪ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದು, ಜಿಲ್ಲೆಯ ಎಲ್ಲಾ ಮೂರ್ತೆದಾರರನ್ನು ಒಗ್ಗೂಡಿಸುವುದು, ಮೂರ್ತೆಗಾರಿಕೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಮೂರ್ತೆದಾರರ ಶ್ರೇಯೋಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.
ಎಲ್ಲಾ ಮೂರ್ತೆದಾರರ ಸಂಘಗಳನ್ನು ಬ್ಯಾಂಕಿಂಗ್ ವ್ಯವಹಾರ ನಡೆಸುವ ಸಾಮರ್ಥ್ಯವುಳ್ಳ ಸಂಘಗಳಾಗಿ ಪರಿವರ್ತಿಸುವುದು ಹಾಗೂ ಹಿಂದೆ ಶೇಂದಿ ಮಾರಾಟ ಸಹಕಾರಿ ಸಂಘಗಳಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರ ಕಾದಿರಿಸಿದ್ದ ಜಮೀನುಗಳನ್ನು ಸಂಘದ ಸುಪರ್ದಿಗೆ ಪಡೆದು ಪುನಃ ಸಕ್ರಿಯಗೊಳಿಸುವ ಚಿಂತನೆಯೂ ಇದೆ ಎಂದು ಅಧ್ಯಕ್ಷ ಕೆ. ಸಂಜೀವ ಪೂಜಾರಿ ತಿಳಿಸಿದ್ದಾರೆ.





























