ಮಂಗಳೂರು: ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (MRPL) ಬಾಯ್ಲರ್ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿ, 8 ಮಂದಿಗೆ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
MRPLನ CHT ಘಟಕದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸ್ಫೋಟದ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು. ಘಟನೆಯಿಂದ MRPL ಪಕ್ಕದಲ್ಲೇ ಇರುವ ಅಂಗನವಾಡಿಗೂ ಹಾನಿಯಾಗಿದೆ. ಅಂಗನವಾಡಿಯ ಕಿಟಕಿ ಗಾಜು ಹಾಗೂ ಗೋಡೆಗೆ ಹಾನಿಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳನ್ನು ತಕ್ಷಣ ಸ್ಥಳಾಂತರಿಸಲಾಗಿದೆ.
ಸ್ಫೋಟ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ 30 ವರ್ಷದ ಯುವಕ ಮನೀಶ್ ಮೃತಪಟ್ಟಿದ್ದಾರೆ. ಮಂಗಳೂರು ಹೊರವಲಯದ ಹಳೆಯಂಗಡಿ ನಿವಾಸಿಯಾಗಿದ್ದ ಮನೀಶ್ MRPL ಪ್ಲಾಂಟ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಗಾಯಗೊಂಡ ರಾಜೇಶ್ ಬ್ಯಾಪ್ಟಿಸ್ಟ್ ಅವರೊಂದಿಗೆ ಮನೀಶ್ ಕೂಡ ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಮನೀಶ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೃತದೇಹ ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಘಟಕದಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬವರಿಗೆ ಸುಮಾರು ಶೇ.35ರಷ್ಟು ಸುಟ್ಟ ಗಾಯಗಳಾಗಿವೆ. ಅವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾಜೇಶ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.



























