ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬನಿಗೆ ವಿದ್ಯಾರ್ಥಿಗಳ ಗುಂಪೊಂದು ನಗರದಲ್ಲಿ ಹಲ್ಲೆ ನಡೆಸಿ, ಚೂರಿಯಿಂದ ಇರಿದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಘಟನೆಗೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಿತ್ತಬಾಗಿಲು ನಿವಾಸಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿ ಮಹಮ್ಮದ್ ಉನೈಸ್ (20) ಚೂರಿ ಇರಿತದಿಂದ ಗಾಯಗೊಂಡ ವಿದ್ಯಾರ್ಥಿ. ಮೊದಲ ವರ್ಷದ ಬಿಕಾಂ ವಿದ್ಯಾರ್ಥಿ ಕಾಟಿಪಳ್ಳದ ರಿಯಾನ್ ಮತ್ತು ಇತರ ಐವರ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜು ಸಮೀಪದ ಕಟ್ಟಡವೊಂದರ ಬಳಿ ಬೆಳಗ್ಗೆ ವಿದ್ಯಾರ್ಥಿಗಳಾದ ರಾಯಿಝ್ ಮತ್ತು ರಿಯಾನ್ ನಡುವೆ ಜಗಳವಾಗಿದೆ. ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಆ ಜಗಳವನ್ನು ಬಿಡಿಸಿದ್ದರು. ಮಧ್ಯಾಹ್ನದ ವೇಳೆಗೆ ರಿಯಾನ್ ಇತರ ಐವರು ವಿದ್ಯಾರ್ಥಿಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಬಳಿಕ ಚೂರಿಯಿಂದ ತಲೆ, ಬೆನ್ನು, ಕಿವಿ ಹಾಗೂ ದೇಹದ ಇತರ ಭಾಗಗಳಿಗೆ ಚುಚ್ಚು ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಗೊಂಡ ಉನೈಸ್ ಅವರನ್ನು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


























