ಬೆಂಗಳೂರು: ನಗರದ ಬೀದಿಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯ ರಾತ್ರಿ ‘ಗುಲಾಬಿ’ಬಣ್ಣದಿಂದ ತುಂಬಿ ಹೋಗಿದ್ದವು. ಸುರಕ್ಷಿತ ಸಾರ್ವಜನಿಕ ಸ್ಥಳಗಳು ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ 300ಕ್ಕೂ ಹೆಚ್ಚು ಮಹಿಳೆಯರು ಗುಲಾಬಿ ಬಣ್ಣದ ವಸ್ತ್ರ ಧರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ರಾತ್ರಿ ಮೆರವಣಿಗೆ ನಡೆಸಿದರು.
ರಂಗಭೂಮಿ ಕಲಾವಿದೆ ಹಾಗೂ ಸಾಹಿತಿ ನೂಪುರ್ ಆಜಾದಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ವಿಶೇಷ ಪ್ರತಿಭಟನಾ ಮೆರವಣಿಗೆಯು ರಾತ್ರಿ 8 ಗಂಟೆಗೆ ಶಿವಾಜಿನಗರದ ಮಹಾತ್ಮಾ ಗಾಂಧಿ ಪಾರ್ಕ್‌ನಿಂದ ಆರಂಭವಾಯಿತು. ಅಲ್ಲಿಂದ ಕಸ್ತೂರ್ಬಾ ರಸ್ತೆಯ ಮೂಲಕ ಸಾಗಿದ ನೂರಾರು ಮಹಿಳೆಯರು ಕೈಯಲ್ಲಿ ಟಾರ್ಚ್ ಹಾಗೂ ಫ್ಲ್ಯಾಶ್‌ಲೈಟ್‌ಗಳನ್ನು ಬೆಳಗಿಸುತ್ತಾ ಫ್ರೀಡಂ ಪಾರ್ಕ್ ತಲುಪಿ ಸಭೆ ಸೇರಿದರು.
ಸಾರ್ವಜನಿಕ ಸ್ಥಳಗಳು ಕೇವಲ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಹಕ್ಕಿದೆ ಎಂಬುದನ್ನು ಸಾರಲು ಈ ಮೆರವಣಿಗೆ ನಡೆಸಲಾಯಿತು.ಸಾಮಾನ್ಯವಾಗಿ ‘ಗುಲಾಬಿ’ ಬಣ್ಣವನ್ನು ಹೆಣ್ಣಿನ ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಆದರೆ, ಈ ಮೆರವಣಿಗೆಯಲ್ಲಿ ಭಾಗವಹಿಸಿದ ಮಹಿಳೆಯರು ಅದೇ ಬಣ್ಣವನ್ನು ತಮ್ಮ ಒಗ್ಗಟ್ಟು, ಶಕ್ತಿ ಮತ್ತು ಸಬಲೀಕರಣದ ಸಂಕೇತವಾಗಿ ಮರುಬಳಕೆ ಮಾಡಿದರು. ‘ಮುಂದಿನ ಸರದಿ ನನ್ನದಾ?’ (Am I Next?) ಎಂಬಿತ್ಯಾದಿ ಪ್ರತಿಭಟನಾ ಫಲಕಗಳನ್ನು ಹಿಡಿದು ಮಹಿಳೆಯರು ಹಕ್ಕುಗಳಿಗಾಗಿ ಧ್ವನಿ ಎತ್ತಿದರು.
ಸಾಫ್ಟ್‌ವೇರ್ ಎಂಜಿನಿಯರ್ ರೋನಿತಾ ತಮ್ಮ 7 ವರ್ಷದ ಮಗಳೊಂದಿಗೆ ಭಾಗವಹಿಸಿ, “ನನ್ನ ಮಗಳಿಗೆ ಸುರಕ್ಷಿತ ಭವಿಷ್ಯವನ್ನು ನಿರ್ಮಿಸುವುದು ನನ್ನ ಕರ್ತವ್ಯ” ಎಂದು ತಿಳಿಸಿದರು. 19 ವರ್ಷದ ಜಾನಸಿನಾ ಮಾತನಾಡಿ, “ಫೆಮಿನಿಸಂ ಎಂದರೆ ಕೇವಲ ಹಕ್ಕುಗಳಲ್ಲ, ಅದು ಸಾಮಾಜಿಕ ಸಮಾನತೆ ಮತ್ತು ಬದಲಾವಣೆ” ಎಂದರು.
ಒಟ್ಟಿನಲ್ಲಿ, ಕತ್ತಲಾದ ಮೇಲೆ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಸಮಾಜದ ಮಾನಸಿಕತೆಯನ್ನು ಸವಾಲು ಮಾಡಿ, ರಾತ್ರಿಯಲ್ಲಿ ಬೆಂಗಳೂರಿನ ಬೀದಿಗಳನ್ನು ಮಹಿಳೆಯರು ತಮ್ಮದಾಗಿಸಿಕೊಂಡ ಜಾಗೃತಿ ನಡಿಗೆ ಇದಾಗಿತ್ತು.



























