ಪುತ್ತೂರು: ಕೇಂದ್ರದ ಹಾಲಿ ಸಚಿವ, ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಕುರಿತಾಗಿ ಯಾವುದೇ ರೀತಿಯ ಮಾನಹಾನಿಕರವಾದ ಮತ್ತು ಆಧಾರ ರಹಿತವಾದ ವರದಿ ಪ್ರಕಟಿಸದಂತೆ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಜ್ಞೆ ವಿಧಿಸಿ ಜುಲೈ 2ರಂದು ಆದೇಶ ನೀಡಿದೆ.
ಪುತ್ತೂರಿನ ಮಾಜಿ ಶಾಸಕರೂ, ಮಂಗಳೂರು ಮತ್ತು ಉಡುಪಿಯ ಮಾಜಿ ಸಂಸದರೂ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಡಿ. ವಿ.ಸದಾನಂದ ಗೌಡರವರು ತಮ್ಮ ಕುರಿತಾಗಿ ಮಾನಹಾನಿಕರವಾದ, ತೇಜೋವಧೆ ಮಾಡುವಂತಹ, ಆಧಾರ ರಹಿತವಾದ ಅಥವಾ ಕಪೋಲ ಕಲ್ಪಿತವಾದ ಯಾವುದೇ ವರದಿ, ಮಾಹಿತಿ ಬಿತ್ತರಿಸದಂತೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಡಿ.ವಿ. ಸದಾನಂದ ಗೌಡರವರ ಪರವಾಗಿ ಹೈಕೋರ್ಟ್ನ ಖ್ಯಾತ ನ್ಯಾಯವಾದಿ ಪುತ್ತೂರು ಮೂಲದವರಾದ ರಾಜಶೇಖರ್ ಇಲ್ಯಾರ್ ಅವರು ವಾದ ಮಂಡಿಸಿದ್ದರು. ಸದಾನಂದ ಗೌಡರವರ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು ಸದಾನಂದ ಗೌಡರವರ ಕುರಿತಾಗಿ ಅಪಮಾನಕಾರಿಯಾಗಿ, ಆಧಾರ ರಹಿತವಾಗಿ ವರದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ವಿಧಿಸಿದ್ದು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.
ಕೋರ್ಟ್ ಮೊರೆ ಹೋಗಲು ಕಾರಣ
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದಲ್ಲಿ ರೈಲ್ವೇ, ಕಾನೂನು, ಅಂಕಿ ಅಂಶ ಅನುಷ್ಠಾನದಂತಹ ಪ್ರಮುಖ ಖಾತೆ ನಿಭಾಯಿಸಿ ಪ್ರಸ್ತುತ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿರುವ ಡಿ.ವಿ.ಸದಾನಂದ ಗೌಡರವರನ್ನು ಸಚಿವ ಸಂಪುಟದಿಂದ ಕೈ ಬಿಡಲಾಗುವುದು ಎಂಬಿತ್ಯಾದಿ ವರದಿಗಳು ಇತ್ತೀಚೆಗೆ ಪ್ರಕಟವಾಗುತ್ತಿತ್ತು. ಕೇಂದ್ರದ ಸಂಪುಟ ಸರ್ಜರಿಯಲ್ಲಿ ಸದಾನಂದ ಗೌಡರವರಿಗೆ ಖೊಕ್ ಎಂದು ವರದಿ ಬಿತ್ತರಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೂಲತಹ ವಕೀಲರೂ ಆಗಿರುವ ಸದಾನಂದ ಗೌಡರವರು ತಮ್ಮ ಆಪ್ತರ ಜತೆ ಚರ್ಚಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.