ವೇಣೂರು: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ನ.3ರಂದು ವೇಣೂರು ಸಮೀಪದ ಮೂಡುಕೋಡಿ ಪಂಜಲಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ಪೆರಾಡಿ ಗ್ರಾಮದ ಅಲೆಕ್ಕಿ ನಿವಾಸಿ, ದಿ. ಕೊರಗಪ್ಪ ಕುಲಾಲ್ ಅವರ ಪುತ್ರ ಸ್ವಸ್ತಿಕ್ (26) ಎಂದು ಗುರುತಿಸಲಾಗಿದೆ.
ವೇಣೂರಿನ ಚಿನ್ನದ ಮಳಿಗೆಯೊಂದರಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಸ್ತಿಕ್, ನ.3ರಂದು ಸಂಜೆ ಕೆಲಸ ಮುಗಿಸಿ ಎಂದಿನಂತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮೂಡುಕೋಡಿ ಪಂಜಲಬೈಲು ಬಳಿ ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸ್ವಸ್ತಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುಟುಂಬದ ಆಧಾರಸ್ತಂಭವಾಗಿದ್ದ ಸ್ವಸ್ತಿಕ್ ಅವರ ಅಕಾಲಿಕ ನಿಧನ ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

























