ತುಳುನಾಡಿನಲ್ಲಿ ಆಟಿ(ಆಷಾಡ)ಮಾಸ ಬಂತೆಂದರೆ ಸಾಕು ಬಗೆ ಬಗೆಯ ತಿನಿಸುಗಳ ಘಮ ಎಲ್ಲಾ ಮನೆಗಳಲ್ಲೂ ಮಾಮೂಲು. ಆಟಿ ತಿಂಗಳಿನಲ್ಲಿ ಅತೀ ಮುಖ್ಯವಾದ, ಸಾಂಪ್ರದಾಯಿಕ ವಿಶೇಷ ದಿನವೆಂದರೆ ಆಟಿ ಅಮಾವಾಸ್ಯೆ. ಈ ದಿನದಂದು ಪ್ರತೀ ಮನೆಯಲ್ಲೂ ಪತ್ರೊಡೆ ಮಾಡುವುದು ರೂಢಿ. ಮರದ ಕೆಸುವಿನಲ್ಲಿ(ಮರ ಚೇವು) ಮಾಡುವ ಈ ತಿನಿಸಿಗೆ ಆಯುಷ್ ಸಚಿವಾಲಯದಿಂದ ಆರೋಗ್ಯ ಪೂರ್ಣ ಆಹಾರ ಪಟ್ಟಿಯಲ್ಲೂ ಸ್ಥಾನ ಸಿಕ್ಕಿದೆ. ಈ ಮೂಲಕ ತುಳುನಾಡಿನ, ತುಳುವರ ಆಹಾರ ಪದಾರ್ಥಗಳು ಆರೋಗ್ಯಕ್ಕೆ ಉತ್ತಮವಾದುದು ಎಂಬುವುದು ಸಾಬೀತಾಗಿದೆ.
ಆಯುಷ್ ಇಲಾಖೆ ಪ್ರಕಟಿಸಿದ 26 ಅರೋಗ್ಯಪೂರ್ಣ ಖಾದ್ಯಗಳ ಪೈಕಿ ಪತ್ರೊಡೆಗೆ ಸ್ಥಾನ ಸಿಕ್ಕಿರುವುದು ತುಳುವರ ಮನಸ್ಸಿನಲ್ಲಿ ಖುಷಿಯುಂಟು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ಉತ್ತರ ಕನ್ನಡ, ಶಿವಮೊಗ್ಗ, ಕೇರಳ ಗುಜರಾತ್ ಮುಂತಾದ ಕಡೆಗಳಲ್ಲೂ ತುಳುವರ ಪತ್ರೊಡೆ ಭಾರಿ ಖ್ಯಾತಿ ಪಡೆದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಕಬ್ಬಿಣಾಂಶ ಹೆಚ್ಚಿರುವ ಕೆಸುವಿನ ಎಲೆಗಳು ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ನ ಅಂಶವನ್ನು ಹೆಚ್ಚಿಸುತ್ತವೆ, ವಿಟಮಿನ್ ಸಿ ಹಾಗೂ ಬೀಟಾ ಕೇರೋಟಿನ್ ಕೂಡಾ ಇದರಲ್ಲಿದೆ ಎಂಬುವುದು ವೈದ್ಯಕೀಯ ವರದಿಯಾದರೂ, ತುಳುವರ ಪ್ರಕಾರ ಹೊಟ್ಟೆಯೊಳಗೆ ಸೇರಿಕೊಳ್ಳುವ ಕೂದಲು ಹಾಗೂ ಇನ್ನಿತರ ಅಂಶಗಳನ್ನು ಕೆಸುವಿನ ಎಲೆಯು ಹೊರಗೆ ಹಾಕುತ್ತವೆ ಎಂಬುವುದಾಗಿದೆ. ಇದೇ ಕಾರಣಕ್ಕಾಗಿ ಇಂದಿಗೂ ತುಳುನಾಡಿನಲ್ಲಿ ಪತ್ರೊಡೆಯು ಆಟಿ ಅಮಾವಾಸ್ಯೆಯಂದು ಮಾಡುತ್ತಾರೆ.
ತುಳುನಾಡಿನ ಸ್ಪೆಷಲ್ ಪತ್ರೊಡೆಯು ಪ್ರಪಂಚದೆಲ್ಲೆಡೆ ಹರಡಲಿ, ಪ್ರತೀ ಮನೆಯಲ್ಲೂ ಪತ್ರೊಡೆಯ ಸವಿ ಘಮಿಸಲಿ, ಆ ಮೂಲಕ ಆರೋಗ್ಯಪೂರ್ಣ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡೋಣ.