ಮಂಗಳೂರು : “ನಾವು ರಾಜಕೀಯ ಕ್ಷೇತ್ರದಲ್ಲಿರುವವರು. ನಾವು ಯಾರ ವೈಯುಕ್ತಿತವಾಗಿ ಮಾತನಾಡುವುದಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಪಾಳಮೋಕ್ಷ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನಾವು ಏನೇ ಮಾಡಿದರೂ ಸಮಾಜ ನಮ್ಮನ್ನು ಗಮನಿಸುತ್ತಿರುತ್ತದೆ. ಪಕ್ಷದ ಕಾರ್ಯಕರ್ತರು ಹಾಗೂ ಜನರು ನಮ್ಮ ಬಳಿ ಬೇಡಿಕೆ, ಇಚ್ಛೆ ಹಾಗೂ ಅಪೇಕ್ಷೆ ಪಡುತ್ತಾರೆ. ಅವರು ಬಂದಾಗ ನಾವು ಗೌರವಯುತವಾಗಿ ನಡೆದುಕೊಳ್ಳಬೇಕು. ಇದು ನಮ್ಮ ಸಂಸ್ಕೃತಿ” ಎಂದಿದ್ದಾರೆ.
“ಯಾವುದೇ ರಾಜಕಾರಣಿಗಳಾದರೂ ಕೂಡಾ ಎಲ್ಲೆಮೀರಿ ನಡೆದುಕೊಳ್ಳಬಾರದು. ಇದು ಸರಿಯಾದ ನಡತೆ ಅಲ್ಲ. ಈ ಘಟನೆಯಿಂದ ಕಾಂಗ್ರೆಸ್ಸಿಗರ ವರ್ತನೆ ಏನು ಎನ್ನುವುದು ತಿಳಿಯುತ್ತದೆ. ಕಾಂಗ್ರೆಸ್ ಮುಖಂಡರೊಬ್ಬರು ಪಕ್ಷದ ಕಾಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವುದು ಇದು ಮೊದಲಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸೌಧದೊಳಗೆ ತೊಡೆತಟ್ಟಿ, ಯುದ್ಧಕ್ಕೆ ಕರೆ ನೀಡಿ ಒಳಹೊಕ್ಕವರು. ವಿಧಾನಸೌಧಕ್ಕೆ ಅಗೌರವ ತೋರಿದವರು ಕಾರ್ಯಕರ್ತರಿಗೆ ಗೌರವ ತೋರಿಸುತ್ತಾರಾ?. ಕಾಂಗ್ರೆಸ್ ರೌಡಿಗಳ ಪಕ್ಷ ಅಲ್ಲ ಎಂದು ಯಾರೂ ಹೇಳಲ್ಲ. ರೌಡಿಸಂ ಅವರ ವ್ಯಕ್ತಿತ್ವದಲ್ಲೇ ಕಾಣಿಸುತ್ತದೆ. ಈ ದೇಶದಲ್ಲಿ ಎಲ್ಲಾ ಕೆಟ್ಟ ಕೆಲಸಗಳಿಗೆ ಅವರೇ ಪ್ರೇರಣೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.