ರಾಜ್ಯದ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರು ಹಾಗೂ ಬೆಂಗಳೂರು ನಡುವೆ ವಿಸ್ಟಾ ಡೋಮ್ ವಿಶೇಷ ರೈಲು ಪ್ರಯಾಣ ಆರಂಭಿಸಲಾಗಿದ್ದು, ಭಾನುವಾರ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಹಗಲಿನಲ್ಲಿ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್ ಪ್ರಯಾಣಿಕರಿಗೆ ವಿಶೇಷ ಅನುಕೂಲತೆ ಕಲ್ಪಿಸಿದೆ. ವಿಶೇಷ ರೈಲಿಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ನೀಡಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ರೈಲ್ವೆ ಇಲಾಖೆಯು ಮುತುವರ್ಜಿ ವಹಿಸಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದೆ. ಸಾರ್ವಜನಿಕರು ಅನೇಕ ಬೇಡಿಕೆಗಳನ್ಬು ಮುಂದಿಟ್ಟಿದ್ದು, ಒಂದೊಂದೇ ಬೇಡಿಕೆಗಳನ್ನು ಈಡೇರಿಸುತ್ತಾ ಬಂದಿದೆ. 2014ರವರೆಗೆ ಆಮೆಗತಿಯಲ್ಲಿ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಯು ಆ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಬಳಿಕ ಸಾಕಷ್ಟು ತ್ವರಿತವಾಗಿ ನಡೆಯುತ್ತಿದೆ ಎಂದರು.
ಮೋದಿಯವರು ಪ್ರಧಾನಿ ಆದ ಬಳಿಕ ರೃಲ್ವೇ ಯೋಜನೆಗಳು ವೇಗ ಪಡೆದುಕೊಂಡಿವೆ ಎಂದು ಹೇಳಿದ ನಳಿನ್, ವಿಸ್ಟಾ ಡೋಮ್ ಪ್ರಯಾಣದ ಮೂಲಕ ಪ್ರಯಾಣಿಕರಿಗೆ ಧಾರ್ಮಿಕ ಮತ್ತು ಪ್ರಾಕೃತಿಕ ದರುಶನ ಭಾಗ್ಯ ದೊರೆಯಲಿದೆ ಎಂದರು.
ದಕ್ಷಿಣ ರೈಲ್ವೇ ಡಿಆರ್ ಎಂ ತ್ರಿಲೋಕ್ ಕೊಠಾರಿ, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಸ್ಟಾಡೋಮ್ ಬೋಗಿಗಳ್ಳುಳ್ಳ ರೈಲು ದಕ್ಷಿಣ ಭಾರತದಲ್ಲಿ ರೈಲ್ವೆ ಇಲಾಖೆಯಿಂದ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಚಲಿಸುವ ಈ ಎಕ್ಸ್‌ಪ್ರೆಸ್ ರೈಲಿಗೆ ಅಳವಡಿಸಲಾದ ವಿಸ್ಟಾಡೋಮ್ ಬೋಗಿಗಳು ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸುವಾಗ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಬಹುದಾಗಿದೆ. ಎತ್ತರದ ಪರ್ವತಗಳ ಅದ್ಭುತ ನೋಟ, ಕಣಿವೆಗಳು, ಆಳವಾದ ಕಮರಿಗಳು ಮತ್ತು ಹಚ್ಚ ಹಸಿರಿನ ಈ ಪ್ರದೇಶಮಾನ್ಸೂನ್‌ನಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ.
ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಹೊಂದಿದೆ, ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್‌ಎಚ್‌ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್‌ಫಾರ್ಮ್ -ತಂತ್ರಜ್ಞಾನ) ನಲ್ಲಿ ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದ್ದು, ಇದು ಬೇಸಿಗೆಯಲ್ಲೂ ಆಕಾಶದ ಸ್ಪಷ್ಟ ನೋಟಗಳನ್ನು ನೀಡುತ್ತದೆ.
ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್ ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ ಗಳಿವೆ. ಇದಲ್ಲದೆ, ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ.