ಪುತ್ತೂರು: ತಮ್ಮ ರಗಡ್ ಲುಕ್, ’ಮಾಸ್ತರ ಮಗಳೇ’ ಎಂಬ ಗಡಸು ದನಿಯ ಡೈಲಾಗ್ ನಿಂದಲೇ ಕನ್ನಡಿಗರ ಮನಗೆದ್ದ ’ಗಿಣಿರಾಮ’ ಧಾರವಾಹಿ ಖ್ಯಾತಿಯ ಶಿವರಾಮ್ ಅಲಿಯಾಸ್ ರಿತ್ವಿಕ್ ಮಠದ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದಿದ್ದು, ಕ್ಯಾಮರಾ ಮುಂದೆ ಒಂದಿಷ್ಟು ಮನಬಿಚ್ಚಿ ಮಾತನಾಡಿದ್ದಾರೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆರಾಧ್ಯ ಭಕ್ತರಾಗಿರುವ ರಿತ್ವಿಕ್ ಮಠದ್ ಅವರು ಇದು ನಾಲ್ಕನೇ ಬಾರಿ ಪುತ್ತೂರಿನೊಡೆಯ ಮಹಾಲಿಂಗೇಶ್ವರನ ದರ್ಶನ ಮಾಡಿರೋದಂತೆ. ’ತಮ್ಮ ಸ್ನೇಹಿತ ರಫೀಕ್ ಪರ್ಲಡ್ಕ ಎಂಬವರಿಂದ ಶ್ರೀ ಮಹಾಲಿಂಗೇಶ್ವರ ದೇವರ ಬಗ್ಗೆ ತಿಳಿದ ಬಳಿಕ ಪ್ರತೀ ವರ್ಷವೂ ಇಲ್ಲಿಗೆ ಆಗಮಿಸುತ್ತಿದ್ದೇನೆ. ಯಾವಾಗ ಬಂದಾಗಲೂ ಇಲ್ಲಿಂದ ಧನಾತ್ಮಕವಾದ ಶಕ್ತಿಯೊಂದು ನನ್ನಲ್ಲಿ ಅಡಕವಾಗುತ್ತದೆ. ಹಾಗಾಗಿ ಇಲ್ಲಿಗೆ ವರ್ಷಂಪ್ರತಿ ಬರುತ್ತೇನೆ’ ಎಂದು ಹೇಳಿದ ಅವರು, ಕಳೆದ ಎರಡು ದಿನಗಳಿಂದ ಪುತ್ತೂರಿನಲ್ಲಿಯೇ ಇದ್ದು ಇಲ್ಲೊಂದಿಷ್ಟು ಅಡ್ಡಾಡಿ ಸಾಹಿತಿ ಡಾ.ಶಿವರಾಮ ಕಾರಂತರ ಬಾಲವನ, ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿ, ಪಂಚಮುಖಿ ಆಂಜನೇಯ ದೇವಾಲಯದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ’ಗಿಣಿರಾಮ’ ಸೀರಿಯಲ್ ಡೈಲಾಗ್ ಅನ್ನು ಹೇಳಿದ ರಿತ್ವಿಕ್ ಮಠದ್ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಮಡದಿಗೆ ಮನೆಗೆಲಸದಲ್ಲಿ ಸಹಕಾರ ನೀಡುವುದರೊಂದಿಗೆ ಒಂದಷ್ಟು ಓದು, ಬರಹ, ಪೈಯಿಂಟಿಂಗ್ ನೊಂದಿಗೆ ಕಾಲ ಕಳೆದಿರೋದನ್ನು ನೆನಪಿಸಿದರು. ಜೊತೆಗೆ ವಾರಪೂರ್ತಿ ಸೀರಿಯಲ್ ಕೆಲಸ ಇರೋದರಿಂದ ಮಡದಿಗೆ ಸಮಯ ಮೀಸಲಿರಿಸೋದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೀಕ್ ಎಂಡ್ ಸಮಯದಲ್ಲಾದರೂ ತಮಗೆ ರಜೆ ನೀಡಬೇಕೆಂದು ಈ ಮೂಲಕವೇ ’ಗಿಣಿರಾಮ’ ಸೀರಿಯಲ್ ನಿರ್ದೇಶಕ, ನಿರ್ಮಾಪಕರಲ್ಲಿ ವಿನಂತಿಸಿದರು.
ಅಲ್ಲದೆ ಉತ್ತರ ಕನ್ನಡ ಭಾಷೆಯನ್ನು ಒಳಗೊಂಡಿರುವ ತಮ್ಮ ’ಗಿಣಿರಾಮ’ ಸೀರಿಯಲ್ ಗೆ ಪುತ್ತೂರಿನಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಸಂಭ್ರಮ ಪಟ್ಟರು. ಜೊತೆಗೆ ಬಿಗ್ ಬಾಸ್ ಗೆ ಹೋಗಲು ಮನಸಿಲ್ಲ ಎಂದಿರುವ ರಿತ್ವಿಕ್ ಮಠದ್, ಚುನಾವಣಾ ಪ್ರಚಾರಕ್ಕೆ ಕರೆ ಬಂದಿತ್ತು. ಆದರೆ ಹೋಗಬೇಕೆಂದು ಇದ್ದರೂ, ಶೂಟಿಂಗ್ ಬ್ಯುಸಿ ಇದ್ದಿರೋದರಿಂದ ಹೋಗಲು ಆಗಿರಲಿಲ್ಲ ಎಂದು ತಮ್ಮ ನೆನಪಿನ ಸುರುಳಿಯಿಂದ ಒಂದಷ್ಟು ಮಾತುಗಳನ್ನು ಬಿಚ್ಚಿಟ್ಟರು.