ಮಂಗಳೂರು: ಸಮಾಜದಲ್ಲಿ ನಾನಾ ಕಷ್ಟಗಳನ್ನು ಹೊತ್ತು ನೋವನ್ನು ಅನುಭವಿಸುವ ಸಾವಿರಾರು ಕುಟುಂಬಗಳಿದ್ದು, ಅವುಗಳ ಪೈಕಿ,ಅನಾರೋಗ್ಯ, ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ, ಕುಸಿದು ಬೀಳುವ ಹಂತದಲ್ಲಿರುವ ಮನೆಗಳು,ಬಾಡಿಗೆ ಮನೆಯಲ್ಲಿ ವಾಸವಿರುವ ಕುಟುಂಬಗಳು ಹೀಗೆ ಹತ್ತಾರು ಸಂಕಟಗಳನ್ನು ಹೊತ್ತ ಕುಟುಂಬಗಳು ಜಾಗತಿಕ ಬಂಟರ ಸಂಘದ ನೆರವಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದು,ಈಗಾಗಲೇ ಜಾಗತಿಕ ಬಂಟರ ಸಂಘದ ಒಕ್ಕೂಟದ ಮೂಲಕ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ 130 ಕ್ಕೂ ಅಧಿಕ ಮಂದಿಗೆ ನೂತನ ಮನೆ ನಿರ್ಮಾಣಕ್ಕೆ ಧನಸಹಾಯ, ನೂರಾರು ಮನೆ ದುರಸ್ತಿಗೆ ಧನಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ಧನಸಹಾಯ, ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ಹೀಗೆ ಸಾವಿರಾರು ಆಶಕ್ತ ಕುಟುಂಬದ ನೋವಿಗೆ ಮಿಡಿಯುವ, ಸ್ಪಂದಿಸುವ ಪ್ರಾಮಾಣಿಕ ಕಾರ್ಯವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ನಡೆಸಿದೆ ಎಂದು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.
ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ)ಮಂಗಳೂರು ಇದರ ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ಸಮಾಜ ಕಲ್ಯಾಣ ಸಹಾಯ ಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮನೆ ನಿರ್ಮಾಣ, ದುರಸ್ತಿ, ಮದುವೆ, ಅನಾರೋಗ್ಯ,ವಿದ್ಯಾಭ್ಯಾಸಕ್ಕೆ ಸಂಘದ ವತಿಯಿಂದ ಫಲಾನುಭವಿಗಳಿಗೆ ಮೊದಲ ಕಂತಿನ ಚೆಕ್ ವಿತರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮುಂಬೈ ಉದ್ಯಮಿ, ಹೇರಂಬ ಅಗ್ರೋವೇಟ್ ಗ್ರೂಪ್ ಮುಖ್ಯಸ್ಥರಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ರವರು, ಮುಂಬೈನ ಉದ್ಯಮಿಯಾಗಿ ಸಾಕಷ್ಟು ವ್ಯವಹಾರದ ಒತ್ತಡವಿದ್ದರೂ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳ ಮೂಲಕ,ಬಡಜನರ ಕಣ್ಣೀರೊರೆಸುವ ಮೂಲಕ ದೇಶ ವಿದೇಶಗಳಲ್ಲಿ ಚಿರಪರಿಚಿತರಾಗಿರುವ ಐಕಳ ಹರೀಶ್ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಮತ್ತು ತುಳುನಾಡಿನ ದೈವ ದೇವರುಗಳ ಅನುಗ್ರಹ ಸದಾ ಅವರ ಮೇಲಿರಲಿ ಎಂದು ಹರಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಸದಾಶಿವ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಕರ್ನಿರೆ ವಿಶ್ವನಾಥ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಪ್ರಸ್ತಾವನೆಗೈದು,ಖಜಾಂಚಿ ಸತೀಶ್ ಅಡಪ ಸ್ವಾಗತಿಸಿದರು. ಸಿಬ್ಬಂದಿ ವಿಂದ್ಯಾ ಪ್ರಾರ್ಥಿಸಿದರು.