ಬೆಳ್ತಂಗಡಿ, ಮೇ 16: ಮಂಗಳೂರು–ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಿಗಲ್–ಸೋಮಂತಡ್ಕ ರಸ್ತೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಮತ್ತೊಮ್ಮೆ ಪರಿಣಾಮಕಾರಿ ಕಾರ್ಯಾಚರಣೆಗೆ ಸಾಕ್ಷಿಯಾದವು.
ಶನಿವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ಅಂಗಡಿಯೊಂದು ನಿರ್ಮಾಣವಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲ್ಪಟ್ಟಿತು. ಈ ದೃಶ್ಯವನ್ನು ಮೊಬೈಲ್ ಮೂಲಕ ಗಮನಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಾಯತ್ರಿ ಅವರು ತಕ್ಷಣ ಪಂಚಾಯಿತಿ ಸಿಬ್ಬಂದಿಗೆ ಮಾಹಿತಿ ನೀಡಿ ಅಂಗಡಿಯನ್ನು ತೆರವುಗೊಳಿಸುವಂತೆ ಸೂಚಿಸಿದರು.
ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚುವ ಮೊದಲು ಸಿಬ್ಬಂದಿ ಸ್ಥಳಕ್ಕೆ ತೆರಳಿ ತಾತ್ಕಾಲಿಕ ಅಂಗಡಿಯನ್ನು ತೆರವುಗೊಳಿಸಿದರು. ಹೆದ್ದಾರಿ ಬದಿಯಲ್ಲಿ ಅನಧಿಕೃತ ತಾತ್ಕಾಲಿಕ ಅಂಗಡಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪಿಡಿಒ ಗಾಯತ್ರಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಇಂತಹ ಅಂಗಡಿಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ನಿಡಿಗಲ್–ಸೋಮಂತಡ್ಕ ಪ್ರದೇಶದ ಸುಮಾರು 4 ಕಿಲೋಮೀಟರ್ ರಸ್ತೆ ವ್ಯಾಪ್ತಿಯಲ್ಲಿ ಈಗಾಗಲೇ 5 ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಇವು ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವುದರ ಜೊತೆಗೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಲು ಸಹಕಾರಿ ಆಗಿವೆ. ಕಳೆದ ಮೂರು ದಿನಗಳ ಹಿಂದಷ್ಟೇ ಅರಣ್ಯ ಪ್ರದೇಶದ ಮೂಲಕ ಸಾಗುವ ಈ ರಸ್ತೆಯ ಮೂರು ಸ್ಥಳಗಳಲ್ಲಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.



























