ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕೋಟೆ ಪ್ರದೇಶದಲ್ಲಿ ಪರವಾನಿಗೆಯ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ದಿನಾಂಕ 14-05-2026 ರಂದು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪರಿಶೀಲಿಸಿದಾಗ, ಕೆಂಪುಕಲ್ಲು ಗಣಿಗಾರಿಕೆ ಪರವಾನಿಗೆಯ ಅವಧಿ 29-04-2026 ರಂದು ಅಂತ್ಯಗೊಂಡಿರುವುದು ದೃಢಪಟ್ಟಿದೆ.
ಆದರೆ, ಪರವಾನಿಗೆ ಪತ್ರದಲ್ಲಿದ್ದ ದಿನಾಂಕವನ್ನು 29-05-2026 ಎಂದು ತಿದ್ದುಪಡಿ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಮೇರಮಜಲು ನಿವಾಸಿ ರಂಜೀತ್ ಕುಮಾರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ ಸಂಖ್ಯೆ 110/2026ರಡಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 318(4), 336(3) ಹಾಗೂ MMDR Act 1957ರ ಕಲಂ 4(1), 4(1A), 21 ಮತ್ತು KMMC Rule 1994ರ ಕಲಂ 3, 44ರಡಿ ತನಿಖೆ ಮುಂದುವರಿದಿದೆ.



























