ಉಪ್ಪಿನಂಗಡಿ, ಆ.15: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಫಾಯಿಝಾ (18) ಅವರು ನೀಡಿದ ದೂರಿನ ಮೇರೆಗೆ, ಮೂವರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಆ.12ರಂದು ರಾತ್ರಿ ಫಾಯಿಝಾ ಅವರು ಕೆಲಸ ಮುಗಿಸಿ ತಮ್ಮ ಪರಿಚಿತರಾದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ ಅವರೊಂದಿಗೆ ಕಾರಿನಲ್ಲಿ ಮನೆಗೆ ಬಂದಿದ್ದರು. ಫಾಯಿಝಾ ಅವರನ್ನು ಮನೆಗೆ ಬಿಟ್ಟು ಉಳಿದ ಮೂವರು ಕಡಬ ಕೊಣಾಲು-ಕೋಲ್ಪೆ ಕಡೆಗೆ ತೆರಳಿದ್ದರು. ಈ ವೇಳೆ ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು ಅಲಿಯಾಸ್ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಎಂಬವರು ಅವರನ್ನು ಅಕ್ರಮವಾಗಿ ತಡೆದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಫಾಯಿಝಾ, ಜಮಾಲ್ ಹಾಗೂ ಫಾಯಿಝಾ ಅವರ ತಂಗಿಯನ್ನೂ ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 189(2), 191(2), 126(2), 352, 115(2), 351(2) ಜೊತೆಗೆ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




























