ಮಂಗಳೂರು: ನಗರದ ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಮುಂಜಾನೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 27 ಕೋಣಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜರಂಗದಳದ ಕಾರ್ಯಕರ್ತರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಪೊಲೀಸರು ಜಪ್ಪಿನಮೊಗರು ಪ್ರದೇಶದಲ್ಲಿ ಈಚರ್ (Eicher) ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕೋಣಗಳನ್ನು ಹಾವೇರಿಯಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಯಾವುದೇ ಮಾನ್ಯ ಪರವಾನಗಿ ಇಲ್ಲದೆ ಹಾಗೂ ಅಮಾನವೀಯ ರೀತಿಯಲ್ಲಿ ಜಾನುವಾರುಗಳನ್ನು ವಾಹನದಲ್ಲಿ ತುಂಬಿಸಲಾಗಿತ್ತು ಎನ್ನಲಾಗಿದೆ.
ರಕ್ಷಿಸಲಾದ ಜಾನುವಾರುಗಳನ್ನು ಸ್ಥಳೀಯ ಗೋಶಾಲೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.



























