ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಮೂಲಕ ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಕಪ್ ವಾಹನದ ಚಾಲಕ ದೇವಳದ ಆಡಳಿತಕ್ಕೆ ತಪ್ಪೊಪ್ಪಿಗೆ ಪತ್ರ ನೀಡಿರುವುದು ತಿಳಿದುಬಂದಿದೆ.
ಆ.13ರಂದು ಸಂಜೆ ದೇವಸ್ಥಾನದ ಆವರಣದಲ್ಲಿರುವ ರಾಜಾಂಗಣದ ಬಳಿ ಮಣ್ಣು ರಾಶಿ ಹಾಕಿ ಪಿಕಪ್ ಮೂಲಕ ಸಾಗಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆ.13ರ ರಾತ್ರಿ ಭಕ್ತರ ಗುಂಪೊಂದು ದೇವಸ್ಥಾನದ ವಠಾರದಲ್ಲಿ ಜಮಾಯಿಸಿ, ಘಟನೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಮಣ್ಣು ಸಾಗಾಟಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಬಳಿಕ ಆ.14ರಂದು ಬೆಳಗ್ಗೆ ಮಣ್ಣು ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಪಿಕಪ್ ವಾಹನವನ್ನು ಪತ್ತೆಹಚ್ಚಲಾಯಿತು.
ಈ ವೇಳೆ ವಾಹನದ ಮಾಲೀಕ ಕೊಡಿಪ್ಪಾಡಿಯ ದಿನೇಶ್ ನಾಯ್ಕ ಕೆ. ಅವರು ದೇವಸ್ಥಾನಕ್ಕೆ ಆಗಮಿಸಿ, ಪತ್ರಿಕಾ ವರದಿಯ ಮೂಲಕ ವಿಷಯ ತಿಳಿದು ಬಂದ ಹಿನ್ನೆಲೆಯಲ್ಲಿ ಬಂದಿರುವುದಾಗಿ ತಿಳಿಸಿದ್ದಾರೆ.
ಪಿಡಬ್ಲ್ಯೂಡಿ ಗುತ್ತಿಗೆದಾರ ವೆಂಕಟ್ರಮಣ ಗೌಡ ಕೊಡಿಪ್ಪಾಡಿ ಅವರ ಸೂಚನೆಯಂತೆ ತಮ್ಮ ಲೇಬರ್ ಮೂಲಕ ದೇವಸ್ಥಾನದ ಹಿಂಭಾಗದ ಅಂಗಣದಿಂದ ಖಾಸಗಿ ಕಟ್ಟಡಕ್ಕೆ ಮಣ್ಣು ಸಾಗಾಟ ಮಾಡಿರುವುದಾಗಿ ಅವರು ದೇವಳಕ್ಕೆ ನೀಡಿದ ಪತ್ರದಲ್ಲಿ ತಿಳಿಸಿದ್ದಾರೆ.
ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ವಿಷಯವನ್ನು ತರದೆ ಮಣ್ಣು ಸಾಗಾಟ ಮಾಡಿರುವುದು ತಪ್ಪಾಗಿದೆ ಎಂದು ಒಪ್ಪಿಕೊಂಡಿರುವ ದಿನೇಶ್ ನಾಯ್ಕ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಬಾಕಿ ಉಳಿದಿರುವ ಮಣ್ಣನ್ನು ತಮ್ಮ ಮೇಲ್ವಿಚಾರಣೆಯಲ್ಲಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಪ್ರಕರಣಕ್ಕೆ ಅನಗತ್ಯವಾಗಿ ಕೋಮು ಬಣ್ಣ ನೀಡಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ. ಮಣ್ಣು ಸಾಗಾಟಕ್ಕೆ ಸಂಬಂಧಿಸಿದವರು ತಮ್ಮ ಪರಿಚಯದವರಾಗಿದ್ದು, ವಾಹನದ ಪ್ರವೇಶದ ವಿಚಾರವನ್ನು ಆಧರಿಸಿ ಅನ್ಯಕೋಮಿನವರ ವಾಹನದ ಮೂಲಕ ದೇವಸ್ಥಾನದ ವಠಾರಕ್ಕೆ ಅಕ್ರಮ ಪ್ರವೇಶ ನಡೆದಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದರು.




























