ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ನೀಲಿ ಚಿತ್ರ ದಂಧೆಯಲ್ಲಿ ಅರೆಸ್ಟ್ ಆದ ಮೇಲೆ ಶಿಲ್ಪಾ ಶೆಟ್ಟಿ ಮೌನವಾಗಿದ್ದರು. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
‘ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ. ಇಂದಿನ ನನ್ನ ಬದುಕನ್ನು ಯಾವುದೂ ಕೂಡ ಕೆಡಿಸಬೇಕಿಲ್ಲ’ ಎಂದು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ ನಮ್ಮನ್ನು ನೋಯಿಸಿದವರ ಬಗ್ಗೆ, ಅನುಭವಿಸಿದ ಹತಾಶೆಯ ಬಗ್ಗೆ, ಕೈಕೊಟ್ಟ ಅದೃಷ್ಟದ ಬಗ್ಗೆ ನಾವು ಕೋಪ ಮಾಡಿಕೊಳ್ಳುತ್ತೇವೆ. ಮುಂದೆ ಬರಬಹುದಾದ ಸಾವು-ನೋವು, ಕಷ್ಟ-ನಷ್ಟಗಳ ಬಗ್ಗೆ ಭಯ ಇಟ್ಟುಕೊಳ್ಳುತ್ತೇವೆ. ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದರ ಚಿಂತೆ ಬಿಟ್ಟು, ಈ ಕ್ಷಣಕ್ಕಾಗಿ ನಾವು ಬದುಕಬೇಕು ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಜು.19ರಂದು ರಾಜ್ ಕುಂದ್ರಾ ಅವರನ್ನು ನೀಲಿ ಚಿತ್ರಗಳ ದಂದೆಯ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಇರುವ ಆರೋಪಗಳನ್ನು ಪುಷ್ಟೀಕರಿಸುವಂತಹ ಅನೇಕ ಸಾಕ್ಷಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ.