ಮುಕ್ಕೂರು : ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನ ಕಾರ್ಯಕ್ರಮವು ಜು.24 ರಂದು ನಡೆಯಿತು.
ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಮಾತನಾಡಿ, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿಯಾಗಿದ್ದರೆ ಮಾತ್ರ ಸರಕಾರದ ಸವಲತ್ತು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮೊಬೈಲ್ ಆ್ಯಪ್ ಮೂಲಕ ರೈತರೆ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ಸ್ವಯಂಪ್ರೇರಿತ ದಾಖಲಿಕರಣ ಅಸಾಧ್ಯವಾದರೆ ಬೇರೆಯವರ ಸಹಾಯ ಪಡೆದು ದಾಖಲು ಮಾಡಬಹುದು. ಅಲ್ಲದಿದ್ದರೆ ಕೃಷಿ ಇಲಾಖೆ ನಿಯೋಜಿಸಿದ ಪಿಆರ್ ಗಳ ಸಹಾಯ ಪಡೆಯಬಹುದು ಎಂದ ಅವರು ಗ್ರಾಮ ಮಟ್ಟದಲ್ಲಿ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಭಾಧ್ಯಕ್ಷತೆ ವಹಿಸಿದ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಹಾಗೂ ನೇಸರ ಯುವಕ ಮಂಡಲದ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸರಕಾರ ಸವಲತ್ತು ಪ್ರತಿಯೊಬ್ಬರಿಗೆ ದೊರೆಯಬೇಕಾದರೆ ಅದಕ್ಕೆ ಪೂರಕವಾಗಿ ಆಗಬೇಕಾದ ದಾಖಲೆಗಳ ಕ್ರೋಢಿಕರಣ ಕೂಡ ಮಹತ್ವದ್ದು. ಬೆಳೆ ಸಮೀಕ್ಷೆಯು ಪ್ರಾಕೃತಿಕ ವಿಕೋಪ, ಕೊಳೆರೋಗ ಮೊದಲಾದ ಸಮಸ್ಯೆಗಳ ಸಂದರ್ಭಗಳಲ್ಲಿ ಪರಿಹಾರ ನೀಡಲು ಪರಿಗಣಿಸಲಾಗುವುದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ದಾಖಲು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ರೈ ಕಾಪು, ಸರಕಾರದ ಯೋಜನೆಗಳು ದೊರೆಯಬೇಕಾದರೆ ಆಯಾ ಇಲಾಖೆ ಗ್ರಾಮಮಟ್ಟದ ಅಗತ್ಯಗಳನ್ನು ಮನಗಂಡು ತಳಮಟ್ಟದಲ್ಲಿ ಕ್ರಿಯಾಶೀಲವಾಗಬೇಕು.ವೈಜ್ಞಾನಿಕ ಪದ್ಧತಿಯ ಮೂಲಕ ಕೃಷಿ ಕೆಲಸಕ್ಕೆ ಒತ್ತು ನೀಡಬೇಕು ಎಂದರು. ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಬೆಳೆ ಸಮೀಕ್ಷೆಯ ಮಾಹಿತಿ ಪಡೆದುಕೊಂಡು ಅದನ್ನು ಇತರರಿಗೆ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ತನ್ಮೂಲಕ ಅಭಿಯಾನದ ಉದ್ದೇಶ ಈಡೇರಬೇಕು ಎಂದರು.
ಪ್ರಗತಿಪರ ಕೃಷಿಕ ಸತ್ಯಪ್ರಸಾದ್ ಕಂಡಿಪ್ಪಾಡಿ ಮಾತನಾಡಿ, ಪ್ರತಿಯೊಬ್ಬರೂ ಕೃಷಿ ಮೂಲಕ ಯಶಸ್ಸು ಸಾಧಿಸಬೇಕಾದರೆ ಆಧುನಿಕ ತಂತ್ರಜ್ಞಾನಗಳ ಬಳಕೆ ಅಗತ್ಯವಾಗಿದೆ. ಜತೆಗೆ ಕಾಲ ಕಾಲಕ್ಕೆ ಸರಕಾರವು ವಿವಿಧ ಯೋಜನೆಗಳ ಮೂಲಕ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ತಾಲೂಕಿನಲ್ಲಿ ಪ್ರಥಮ ಕಾರ್ಯಕ್ರಮ: ಬೆಳೆ ಸಮೀಕ್ಷೆ ದಾಖಲೀಕರಣ ಬಗ್ಗೆ ಜಲಾನಯನ ತಂಡದ ಮುಖ್ಯಸ್ಥ ಈಶ್ವರ್ ಸಮಗ್ರ ಮಾಹಿತಿ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ತಾಲೂಕಿನಲ್ಲೇ ಪ್ರಥಮವಾಗಿ ಆಯೋಜನೆಗೊಂಡಿದೆ ಎಂದು ಅವರು ಸಂಘಟಕರನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮಾರು, ಪ್ರಗತಿಪರ ಕೃಷಿಕ ನಾಗರಾಜ ಭಟ್ ಕಜೆ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ, ಪೈಬೆರ್ ಎಂಜಿನಿಯರ್ ಯತೀಶ್ ಕಾನಾವುಜಾಲು, ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ನೀರ್ಕಜೆ, ಗೋಪಾಲಕೃಷ್ಣ ಭಟ್ ಮನವಳಿಕೆ, ಸುಜಾತ ರಾಜ್ ಕಜೆ, ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ಸ್ಪೂರ್ತಿ ರೈ ಕಾಪು ಸ್ವಾಗತಿಸಿ, ವಂದಿಸಿ ನಿರೂಪಿಸಿದರು.
ಬೆಳೆ ಸಮೀಕ್ಷೆಗೆ ನಿಯೋಜನೆ; ಇದೇ ಸಂದರ್ಭದಲ್ಲಿ ಮುಕ್ಕೂರು ವಾರ್ಡ್ ನಲ್ಲಿ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸಿ ದಾಖಲಿಕರಣ ಮಾಡಲು ಪಿಆರ್ ಆಗಿ ಮಹೇಶ್ ಕುಂಡಡ್ಕ ಅವರನ್ನು ನಿಯೋಜಿಸಲಾಗಿದ್ದು ಆಸಕ್ತರು ಅವರನ್ನು ಸಂಪರ್ಕಿಸಬಹುದಾಗಿದೆ.