ಬೆಂಗಳೂರು: ಕೊರೊನಾದ ಎರಡನೇ ಅಲೆ ಇನ್ನೂ ಸಂಪೂರ್ಣವಾಗಿ ಕೊನೆಯಾಗಿಲ್ಲ. ಅಲ್ಲದೇ, ಕೊರೊನಾದ ಮೂರನೇ ಅಲೆಯ ಭಯವೂ ಜನರಲ್ಲಿದೆ. ಹಾಗಾಗಿ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದು ಜನರ ಕರ್ತವ್ಯವಾಗಿದೆ. ಈ ನಡುವೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾಸ್ಕ್ ಧರಿಸದೇ ಸೈಕಲ್ ಸವಾರಿ ಮಾಡಿದ್ದು, ಟೀಕೆಗೆ ಒಳಗಾಗಿದ್ದಾರೆ.
ತೇಜಸ್ವಿ ಸೂರ್ಯ ಅವರು ಮಾಸ್ಕ್ ಧರಿಸದೇ ಸೈಕಲ್ ಸವಾರಿ ಮಾಡಿದ್ದು, ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಜನರ ಆಕ್ಷೇಪಕ್ಕೆ ಕಾರಣವಾಗಿದ್ದು, ತೇಜಸ್ವಿ ಸೂರ್ಯ ಅವರ ನಡೆಗೆ ಜನರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
“ನಮ್ಮಂತ ಸಾಮಾನ್ಯ ನಾಗರಿಕರಿಗೊಂದು ನ್ಯಾಯ, ನಿಮ್ಮಂತ ಪ್ರಭಾವಿ ಜನಪ್ರತಿನಿಧಿಗಳಿಗೆ ಒಂದು ನ್ಯಾಯವೇ?” ಎಂದು ಕೆಲವು ಪ್ರಶ್ನಿಸಿದ್ದಾರೆ.
“ಯುವ ಪೀಳಿಗೆಗೆ ಉತ್ತೇಜನ ನೀಡುವ ನಿಮ್ಮ ಪ್ರಯತ್ನವನ್ನು ಮೆಚ್ಚುತ್ತೇನೆ. ಆದರೆ, ನೀವು ಕೊರೊನಾ ನಿಯಮಗಳನ್ನು ಪಾಲಿಸಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ವೇಳೆ ಎಚ್ಚರವಹಿಸಿ. ಏಕೆಂದರೆ, ನಿಮ್ಮನ್ನು ಅನೇಕ ಯುವ ಜನರು ಅನುಸರಿಸುತ್ತಾರೆ” ಎಂದು ಹೇಳಿದ್ದಾರೆ.
“ಮಾಸ್ಕ್ ಧರಿಸಿ? ಎಲ್ಲಿದೆ ಮಾಸ್ಕ್” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.