ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ, ಸರ್ಪ ಸಂಸ್ಕಾರಕ್ಕೆ ದೇಶ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಿಂದ ಸೇವೆಗಳು ಆರಂಭಗೊಳ್ಳಲಿದೆ.
ಕ್ಷೇತ್ರದಲ್ಲಿನ ಪ್ರಧಾನ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕ ಜು.29ರಿಂದ ಪ್ರಾರಂಭಗೊಳ್ಳಲಿದೆ.
ಈ ಮೊದಲೇ ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ,ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶವಿರಲಿಲ್ಲ. ಆದರೆ ಇಂದಿನಿಂದ ಸೇವೆಗಳ ಜೊತೆಗೆ ಭಕ್ತರಿಗೆ ಭೋಜನ ಪ್ರಸಾದ ಸೇವೆಯೂ ನಡೆಯಲಿದೆ.
ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ, ಅಪರಾಹ್ನ 3.30ರಿಂದ ರಾತ್ರಿ 8.30ರ ತನಕ ಭಕ್ತರಿಗೆ ಶ್ರೀ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಪ್ರಧಾನ ಸೇವೆಗಳಿಗೆ ಸಮಯಾವಕಾಶವಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.