ಪುತ್ತೂರು:ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಲಕ್ಕೆ ಅವಭೃತ ಸ್ನಾನಕ್ಕೆ ಬರುವ ರಸ್ತೆಯನ್ನು 30 ಅಡಿಯಷ್ಟು ಅಗಲೀಕರಣಗೊಳಿಸಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ.ಇದಕ್ಕಾಗಿ ರಸ್ತೆಗೆ ಸಂಬಂಧಪಟ್ಟ ಕೃಷಿಕರಲ್ಲಿ ಮಾತನಾಡಿ ಮನವೊಲಿಸಲಾಗುವುದು.ಕಾನೂನು ಪ್ರಕಾರ ಹೋದರೆ ಅವರಲ್ಲಿ ಹೆಚ್ಚುವರಿ ಜಾಗಗಳಿವೆ.ಅವರೂ ದೇವರಿಗಾಗಿ ಬಿಟ್ಟುಕೊಡಲು ತಯಾರಿರಬಹುದು ಎಂಬ ಭಾವನೆ ನಮ್ಮಲ್ಲಿದೆ.ಜಾಗ ಅವರು ಬಿಟ್ಟುಕೊಟ್ಟರೆ ಅಭಿವೃದ್ಧಿ ನಾವು ಮಾಡುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವ ವೀರಮಂಗಲದ ಕುಮಾರಧಾರ ನದಿ ಬಳಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವರು ಹಲವು ಕಿ.ಮೀ. ದೂರದಿಂದ ಈ ಗ್ರಾಮಕ್ಕೆ ಬಂದು ನದಿಯಲ್ಲಿ ಸ್ನಾನ ಮಾಡಿದ ಬಳಿಕ ಇಡೀ ಭಕ್ತ ಜನ ಸಂಕುಲವೇ ನೀರಿನಲ್ಲಿ ಸ್ನಾನ ಮಾಡುವಂಥ ವಿಶಿಷ್ಠ ಆಚರಣೆ ಪುತ್ತೂರಿನಲ್ಲಿದೆ.ಇಂತಹ ಆಚರಣೆ ಬೇರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ.ಇದನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮಾಡುವ ಯೋಚನೆಯಿದೆ.ಇದಕ್ಕಾಗಿ ಸ್ಥಳ ವೀಕ್ಷಣೆ ಮಾಡಿದ್ದು ಇಲ್ಲಿ ಸುಮಾರು 18 ಎಕರೆ ಸರಕಾರಿ ಜಾಗವಿದೆ.ಇಲ್ಲಿಗೆ ಬರುವ ಭಕ್ತಾದಿಗಳಿಗೆ ವಾಹನ ನಿಲುಗಡೆ, ಶೌಚಾಲಯ, ಮಹಿಳೆಯರಿಗೆ ಉಡುಪು ಬದಲಾಯಿಸುವ ಕೊಠಡಿಗಳ ಕೊರತೆಯಿದ್ದು ನದಿ ನೀರು ಮಲಿನವಾಗುವ ಸಾಧ್ಯತೆಗಳಿವೆ.ಇದಕ್ಕಾಗಿ ನದಿಯಲ್ಲಿ ಸುಮಾರು 4 ಅಡಿಯಷ್ಟು ನೀರು ನಿಂತು, ವಿಸ್ತಾರವಾಗಿರಬೇಕು.
ಕಠಾರದಲ್ಲಿ ರೂ.100 ಕೋಟಿಯ ಅಣೆಕಟ್ಟಿನ ಪ್ರಸ್ತಾವನೆಯಿದ್ದು ಅದು ಆದಾಗ ಇಲ್ಲಿಯೂ ನೀರು ಸಂಗ್ರಹವಾಗಲಿದೆ.ಇಲ್ಲಿ ತಡೆಗೋಡೆ,ಶೌಚಾಲಯ ನಿರ್ಮಾಣ ಹಾಗೂ ರಸ್ತೆ ಅಗಲೀಕರಣಗೊಳ್ಳಬೇಕಿದೆ ಎಂದು ಶಾಸಕರು ತಿಳಿಸಿದರು.
ಮಹಾಲಿಂಗೇಶ್ವರ ದೇವರು ಪುಣ್ಯಸ್ನಾನಕ್ಕೆ ಬರುವ ವೀರಮಂಗಲದಲ್ಲಿ ಕಳೆದ ಜಾತ್ರೆಯ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಿದ್ದು ಬಹಳಷ್ಟು ಸಮಸ್ಯೆಗಳು ಉಂಟಾಗಿತ್ತು.ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.ಇಲ್ಲಿಗೆ ಬರುವ ಭಕ್ತಾದಿಗಳ ಹಿತದೃಷ್ಠಿಯಿಂದ ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.
ಯಾರಿಗೂ ಅನ್ಯಾಯ ಮಾಡುವ ಕೆಲಸ ಮಾಡುವುದಿಲ್ಲ:
ಭಕ್ತರ ಆಶಯದಂತೆ 30 ಅಡಿ ರಸ್ತೆ ನಿರ್ಮಾಣಕ್ಕೆ ರಸ್ತೆ ಪಕ್ಕದ ತೋಟದವರನ್ನು ಮನವೊಲಿಸುವ ಕೆಲಸ ಮಾಡಲಾಗುವುದು.ಅವರ ಜಾಗದಲ್ಲಿ ಹೆಚ್ಚುವರಿ ಜಾಗಗಳಿವೆ. ಅದನ್ನು ಸರ್ವೆ ನಡೆಸಲಾಗುವುದು. ಯಾರಿಗೂ ಅನ್ಯಾಯ ಮಾಡುವ ಕೆಲಸ ಮಾಡುವುದಿಲ್ಲ.ಕ್ಷೇತ್ರದ ಅಭಿವೃದ್ಧಿಗಾಗಿ ಏನೆಲ್ಲ ಅವಶ್ಯಕತೆ ಇದೆಯಾ ಅದೆಲ್ಲವನ್ನೂ ಮಾಡಲಾಗುವುದು.
ಜಾಗವನ್ನು ಬೇಲಿ ಹಾಕಿ ಸಕ್ರಮ ಮಾಡಿಕೊಂಡರೆ ಅದಕ್ಕೆ ಅವಕಾಶ ಕೊಡುವುದಿಲ್ಲ.ನದಿಯ ಪಕ್ಕದಲ್ಲಿಯೂ ಜನರಿಗೆ ನಿಲ್ಲಲು ಸಾಕಷ್ಟು ವಿಸ್ತಾರವಾದ ಸ್ಥಳಾವಕಾಶ ಬೇಕಾಗಿದೆ.ಜೊತೆಗೆ ನೂರಕ್ಕೂ ಅಧಿಕ ಶೌಚಾಲಯ, ಸ್ನಾನಗೃಹಗಳ ಅವಶ್ಯಕತೆಯಿದೆ.ನದಿ ಪರಂಬೋಕು ಆಗಿದ್ದು ಕಂದಾಯ ಇಲಾಖೆಯ ನಿಯಮದಂತೆ ನದಿ ತಟದಿಂದ 100 ಮೀಟರ್‌ನಲ್ಲಿ ಕೃಷಿಗೆ ಅವಕಾಶವಿಲ್ಲ.ಅದರಂತೆ ನದಿಯ ಪಕ್ಕದಲ್ಲಿರುವುದನ್ನು ತೆರವುಗೊಳಿಸಿ ವಿಸ್ತಾರವಾದ ಜಾಗ ನಿರ್ಮಿಸಲಾಗುವುದು.
ಭಕ್ತಾದಿಗಳ ಅವಶ್ಯಕತೆಗೆ ತಕ್ಕಂತೆ ಶಾಶ್ವತ ಯೋಜನಗೆಳನ್ನು ಮಾಡಲಾಗುವುದು.ಆಗ ಉತ್ತಮ ಕ್ಷೇತ್ರವಾಗಿ ಬೆಳಗಲಿದೆ ಮತ್ತು ಇಲ್ಲಿನ ಜನರಿಗೂ ಉತ್ತಮ ಎಂದು ಹೇಳಿದ ಅಶೋಕ್ ಕುಮಾರ್ ರೈ, ಈ ಭಾಗದ ಜನರಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.ವಾಹನ ನಿಲುಗಡೆಗೆ ಹತ್ತು ಎಕರೆ ಜಾಗದ ಅವಶ್ಯಕತೆಯಿದೆ.ಮುಂದೆ ಅದನ್ನು ಕ್ರೀಡಾಂಗಣ ಸೇರಿದಂತೆ ಈ ಭಾಗದ ಎಲ್ಲಾ ಕಾರ್ಯಕ್ರಮಗಳಿಗೂ ಬಳಕೆ ಮಾಡಬಹುದು ಎಂದೂ ಶಾಸಕರು ತಿಳಿಸಿದರು.
ಕಂದಾಯ ನಿರೀಕ್ಷಕ ಕೆ.ಟಿ.ಗೋಪಾಲ್, ಉಪ ವಲಯ ಅರಣ್ಯಾಧಿಕಾರಿ ರಾಜೇಂದ್ರ ಪ್ರಸಾದ್ ಜಾಗದ ಕುರಿತು ಮಾಹಿತಿ ನೀಡಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ,ಲೋಕೇಶ್ ಪಡ್ಡಾಯೂರು, ಹೊನ್ನಪ್ಪ ಪೂಜಾರಿ ಕೈಂದಾಡಿ, ದಿನೇಶ್, ರವೀಂದ್ರ ಶೆಟ್ಟಿ ನೆಕ್ಕಿಲು, ರಾಘವೇಂದ್ರ ನಾಯಕ್, ಬಾಬು ಶೆಟ್ಟಿ ವೀರಮಂಗಲ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಅಭಿವೃದ್ಧಿಗೆ ಬೇಕಾದ ಎಲ್ಲಾ ಯೋಚನೆಗಳು ನಮ್ಮಲ್ಲಿವೆ.ಜನರು ಸಹಕರಿಸಿದರೆ ಎರಡು ತಿಂಗಳಲ್ಲಿ ಅದಕ್ಕೆ ಬೇಕಾದ ಎಲ್ಲಾ ಕೆಲಸ ನಡೆಯಲಿದೆ.ಜನ ಜಾಗ ಬಿಟ್ಟುಕೊಟ್ಟರೆ ನಾಳೆಯೇ ಜೆಸಿಬಿ ಬಂದು ಕಾಮಗಾರಿ ಪ್ರಾರಂಭವಾಗಲಿದೆ.ಜನರು ವಿರೋಧ ಮಾಡದೇ ಸ್ವ ಇಚ್ಚೆಯಿಂದ ಬಿಡಬೇಕು.ಮುಸ್ಲಿಮರೊಬ್ಬರು ಜಾಗ ಬಿಟ್ಟುಕೊಡಲು ಮುಂದಾಗಿದ್ದಾರೆ. ಉಳಿದವರನ್ನೂ ಮನವೊಲಿಸಲಾಗುವುದು. ಬಿಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವರ ಸ್ವಾಧೀನದಲ್ಲಿರುವ ಜಾಗವನ್ನು ಪೂರ್ತಿ ಅಳತೆ ಮಾಡಿ ಹೆಚ್ಚುವರಿಯಿದ್ದರೆ ನಮಗೆ ಬೇಕಾದಷ್ಟು ಜಾಗವನ್ನು ಪಡೆದುಕೊಳ್ಳಲಾಗುವುದು
– ಅಶೋಕ್ ಕುಮಾರ್ ರೈ,
ಶಾಸಕರು ಪುತ್ತೂರು


























