ಮಂಗಳೂರು: “ಸೋಂಕು ಹೆಚ್ಚಾದಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ” ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಜನತೆಗೆ ಮನವಿ ಮಾಡಿದ್ದಾರೆ.
“ಸೋಂಕು ಹೆಚ್ಚದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡಬೇಕಾಗುತ್ತದೆ. ವೀಕೆಂಡ್ ಕರ್ಫ್ಯೂನಂತಹ ನಿಯಮಗಳನ್ನು ಕೂಡಾ ಜಾರಿ ಮಾಡಬೇಕಾಗುತ್ತದೆ. ಈ ಹಿನ್ನೆಲೆ ಕಡ್ಡಾಯವಾಗಿ ಮಾಸ್ಕ್ ಧರಿಸಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ” ಎಂದು ಹೇಳಿದ್ದಾರೆ. “ಕೊರೊನಾ ನಿಯಂತ್ರಣದ ಸಲುವಾಗಿ ಜಿಲ್ಲಾಧಿಕಾರಿಗಳೇ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೊರೊನಾ ಕಾರಣದಿಂದ ಎಲ್ಲಾ ವರ್ಗದವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಸಂಪೂರ್ಣ ಲಾಕ್‌ಡೌನ್ ಆಗಬಾರದು ಎನ್ನುವುದಾದರೆ ಜನರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಜನರು ಕೊರೊನಾ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಯಾಗುವ ಪರಿಸ್ಥಿತಿ ಬಂದರೂ ಬರಬಹುದು. ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸಂಪೂರ್ಣ ಪ್ರಯತ್ನ ಮಾಡುತ್ತಿದೆ” ಎಂದು ತಿಳಿಸಿದ್ದಾರೆ.
“ಜನಪ್ರತಿನಿಧಿ, ಸಂಸದರು ಹಾಗೂ ಎಲ್ಲಾ ಶಾಸಕರ ಜೊತೆ ಚರ್ಚೆ ನಡೆಸಿ ಪರೀಕ್ಷಾ ಪ್ರಮಾಣ ಹೆಚ್ಚು ಮಾಡಲು ಮನವಿ ಮಾಡಲಾಗಿದೆ. ಸದ್ಯ ನಾವು 7-9 ಸಾವಿರ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಮೊದಲ ಅಲೆಯ ಸಂದರ್ಭ 2-3 ಸಾವಿರದಷ್ಟು ಕೊರೊನಾ ಪರೀಕ್ಷೆಗಳನ್ನು ನಡೆಸುತ್ತಿದ್ದೆವು. ಈಗ 10-12 ಸಾವಿರದವರೆಗೆ ಪರೀಕ್ಷೆಗಳನ್ನು ನಡೆಸಲು ಯೋಜಿಸಿದ್ದೇವೆ. . ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಜನರು ನಿರ್ಲಕ್ಷ್ಯ ವಹಿಸಿದರೆ ಮತ್ತೆ ಲಾಕ್‌ಡೌನ್‌ನತ್ತ ಸಾಗಬೇಕಾಗುತ್ತದೆ. ಆದರೆ, ಮತ್ತೆ ಲಾಕ್‌ಡೌನ್ ಜಾರಿ ಮಾಡಬಾರದು ಎನ್ನುವ ಉದ್ದೇಶ ನಮ್ಮದು. ಜನರ ಸಹಕಾರ ಮುಖ್ಯ” ಎಂದಿದ್ದಾರೆ.
“ಮುಂಬರುವ ಹಬ್ಬಗಳು ನಾಗರಪಂಚಮಿ, ಗಣೇಶ ಚತುರ್ಥಿ ಹಬ್ಬಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಬಾರದು ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾ ಧಾರ್ಮಿಕ ಪರಿಷತ್ತಿನಲ್ಲಿ ಕೂಡಾ ಯಾವೆಲ್ಲಾ ನಿಯಮಗಳ ಕೈಗೊಳ್ಳಬೇಕು ಎನ್ನುವ ಬಗ್ಗೆ ಈ ವಾರದಲ್ಲಿ ತಿಳಿಸಲಿದ್ದೇವೆ” ಎಂದು ಹೇಳಿದ್ದಾರೆ.
“ಸಾರ್ವಜನಿಕರು ಅವರ ಮನೆಯಲ್ಲಿ ವೈಯುಕ್ತಿಕವಾಗಿ ಹಬ್ಬಗಳನ್ನು ಆಚರಿಸಬಹುದು. ಆಷಾಡ ಮಾಸ ಮುಗಿದ ಬಳಿಕ ಹೆಚ್ಚಿನ ವಿವಾಹ ಕಾರ್ಯಗಳು ನೆರವೇರಲಿದ್ದು, ವಿವಾಹ ಕಾರ್ಯಕ್ರಮಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ವಿವಾಹ ಕಾರ್ಯಕ್ರಮದಲ್ಲಿ ಒಂದು ವೇಳೆ ಹೆಚ್ಚಿನ ಜನ ಸೇರಿದ್ದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
“ಗಡಿ ಭಾಗದಿಂದ ಹಾಗೂ ಕೇರಳದಿಂದ ದಿನನಿತ್ಯ ಬಸ್ ಮೂಲಕ ಪ್ರಯಾಣಿಸುವವರು ಹಾಗೂ ರೈಲಿನ ಮೂಲಕ ಪ್ರಯಾಣಿಸುವ ಜನರ ಬಗ್ಗೆ ರಾಜ್ಯ ಸರ್ಕಾರದ ಬಗ್ಗೆ ಮನವಿ ಮಾಡಿದ್ದೇವೆ. ಕೇರಳದಲ್ಲಿ ರೈಲಿಗೆ ಹತ್ತುವ ಮುನ್ನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರವೇ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ.. ಆರೋಗ್ಯ ಕಾರ್ಯಕರ್ತರು ಕೂಡಾ ಜನರ ಆರೋಗ್ಯ ತಪಾಸಣೆ ಮಾಡಬೇಕು. ಅಂತರ್‌ರಾಜ್ಯ ಸಂಚಾರಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ. ಈ ಬಗ್ಗೆ ನಿರ್ಬಂಧ ಹೇರುವ ಬಗ್ಗೆ ಯೋಚಿಸುತ್ತಿದ್ದೇವೆ. ಇಂದು ನಡೆಯುವ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಿದ್ದೇವೆ. ದಿನನಿತ್ಯ ಯಾರು ಸಂಚಾರಿಸುತ್ತಾರೋ ಅವರಿಗೆ ಪಾಸ್ ವ್ಯವಸ್ಥೆ ಮಾಡಿ ನಿಯಮಿತವಾಗಿ ವಾರಕ್ಕೆ ಒಂದು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ” ಎಂದಿದ್ದಾರೆ.
“ಅಂತರ್‌ಜಿಲ್ಲೆ ಸಂಚಾರಕ್ಕೂ ಕೂಡಾ ನಿರ್ಬಂಧ ಹೇರುವ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಕಳೆದ ಎರಡು ದಿವಸಗಳಿಂದ ಪಾಸಿಟಿವಿಟಿ ರೇಟ್ ಶೇ. 5.76 ಹಾಗೂ 5.11 ಇತ್ತು. ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.4.6 ರಷ್ಟು ಇತ್ತು. ಒಂದು ವೇಳೆ ಪಾಸಿಟಿವಿಟಿ ರೇಟ್ ಶೇ. 5ರಿಂದ ಹೆಚ್ಚಾದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮಾಹಿತಿ” ನೀಡಿದ್ಧಾರೆ. “ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಕಡ್ಡಾಯವಾಗಿ ಜನರು ನಿಯಮಗಳನ್ನು ಪಾಲಿಸಬೇಕು” ಎಂದು ತಿಳಿಸಿದ್ದಾರೆ.