ಪುತ್ತೂರು: ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಿಂದೂ ಜಾಗರಣ ವೇದಿಕೆ ಪುತ್ತೂರು ವತಿಯಿಂದ ಸಹಾಯಕ ಕಮೀಷನರ್ ರವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಅಪಾಯಕಾರಿ ಉಗ್ರಗಾಮಿ ಸಂಘಟನೆ ಎಂದೇ ಗುರುತಿಸಲ್ಪಟ್ಟಿರುವ ಎಎಸ್ಐ ಜೊತೆಗೆ ಉಳ್ಳಾಲದ ಮಾಜಿ ಶಾಸಕರೊಬ್ಬರ ಸಂಬಂಧಿಗಳು ಸಂಪರ್ಕ ಹೊಂದಿದ್ದ ಬಗ್ಗೆ ರಾಷ್ಟ್ರೀಯ ತನಿಖಾದಳ ಕಾರ್ಯಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದಿದೆ. ಮಂಗಳೂರು-ಉಳ್ಳಾಲ, ಉಡುಪಿ, ಭಟ್ಕಳ, ಕೊಡಗು ಈ ಪ್ರದೇಶಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಲ್ಲಿನ ಪ್ರಜ್ಞಾವಂತ ನಾಗರೀಕ ಆತಂಕಕ್ಕೆ ಕಾರಣವಾಗಿದೆ. ಕರಾವಳಿ ಮತ್ತು ಮಲೆನಾಡಿನ ಸುರಕ್ಷತಾ ದೃಷ್ಟಿಯಿಂದ ಹಿಂದೂ ಜಾಗರಣ ವೇದಿಕೆ ಕೆಲವು ಮಹತ್ವದ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದೆ.
- ಮಂಗಳೂರಿನಲ್ಲಿ ಈವರೆಗೆ ನಡೆದಿರುವ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳು ಮತ್ತು ಕೇರಳ ಮತ್ತು ಭಟ್ಕಳದ ನಂಟು ಹೊಂದಿರುವ ಉಗ್ರಗಾಮಿ ಸಂಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಮುಂದೆ ಈ ಘಟನೆಗಳು ಮರುಕಳಿಸುವಂತೆ ಎಚ್ಚರ ವಹಿಸಲು ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ ಕಚೇರಿಯನ್ನು ತೆರೆಯಬೇಕು.
- ಕೋಮು ಹಿಂಸಾಚಾರ ಮತ್ತು ಉಗ್ರಗಾಮಿ ಚಟುವಟಿಕೆಗಳಿಗೆ ನೈತಿಕ ಬೆಂಬಲ ಮತ್ತು ಆರ್ಥಿಕ ಬೆಂಬಲವನ್ನು ನೀಡುತ್ತಾ ಬಂದಿರುವ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಗಳು ಇಸ್ಲಾಮಿಕ್ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳ ಬಗ್ಗೆ ತನಿಖೆ ನಡೆಸಿ ಅವರ ಆರ್ಥಿಕ ಮೂಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು.
- ಲವ್ ಜಿಹಾದ್ ನ ಮೂಲಕ ಹಿಂದೂ ಯುವತಿಯರನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಅನ್ಯಧರ್ಮಕ್ಕೆ ಮತಾಂತರ ಮಾಡಿ ಉಗ್ರಗಾಮಿ ಹಾಗೂ ಸಮಾಜ ಘಾತುಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಳೆದ ಹತ್ತು ವರ್ಷದಲ್ಲಿ ಮುಸ್ಲಿಂ ಯುವಕರನ್ನು ಪ್ರೀತಿಸಿ ಮದುವೆಯಾಗಿ ಅನ್ಯಧರ್ಮಕ್ಕೆ ಮತಾಂತರಗೊಂಡ ಹಿಂದೂ ಯುವತಿಯರ ಸದ್ಯದ ಸ್ಥಿತಿಗತಿಗಳು ಹೇಗಿದೆ ಎನ್ನುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು.
- ತಮ್ಮ ಸಂಖ್ಯಾಬಾಹುಳ್ಯವನ್ನು ಹೆಚ್ಚಿಸಿಕೊಳ್ಳಲು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ಲವ್ ಜಿಹಾದ್ ಚಟುವಟಿಕೆ ಕರಾವಳಿಯಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕಲು ಸರಕಾರ ಉತ್ತರ ಪ್ರದೇಶದ ಮಾದರಿಯಲ್ಲಿ ಕಠಿಣವಾದ ಕಾನೂನು ಜಾರಿ ಮಾಡಬೇಕು.
- ಕರಾವಳಿಯಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳು ಎಂದು ಕರೆಸಿಕೊಳ್ಳುತ್ತಿರುವ ಕೆಲ ಆಯಕಟ್ಟಿನ ಜಾಗಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಅಲ್ಲಿ ವಾಸಿಸುತ್ತಿರುವ ಹಿಂದೂ ಧರ್ಮಿಯರ ರಕ್ಷಣೆಗೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೀಡುವುದು ಮತ್ತು ಅಂತಹ ಠಾಣೆಯ ಅಧಿಕಾರಿಗಳಿಗೆ ತುರ್ತು ಸಂದರ್ಭದಲ್ಲಿ ವಿಶೇಷ ಅಧಿಕಾರವನ್ನು ಕೊಡಬೇಕು.
- ಕರಾವಳಿಯ ಕಡಲ ತಡಿಯು ದೇಶದ ಗಡಿಯಾಗಿದ್ದು, ಇಲ್ಲಿ ಅನೇಕ ರೀತಿಯ ಭದ್ರತಾ ವೈಫಲ್ಯಗಳನ್ನು ನಾವು ಎದುರಿಸುತ್ತಿದ್ದೇವೆ. ಮುಂಬೈ ಉಗ್ರದಾಳಿ ಕಡಲಿನ ಮಾರ್ಗದ ಮೂಲಕವೇ ನಡೆದಿರುವುದನ್ನು ಮರೆಯುವಂತಿಲ್ಲ, ಹೀಗಾಗಿ ಉತ್ತರ ಕನ್ನಡದಿಂದ ಮಂಗಳೂರು ಉಳ್ಳಾಲದ ವರೆಗೆ ಇರುವ ಕಡಲ ತಡಿಯ ಮೂಲಕ ವಿಧ್ವಂಸಕಾರಿ ಶಕ್ತಿಗಳು ಒಳಬಾರದಂತೆ ವಿಶೇಷ ಭದ್ರತಾ ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳಬೇಕು.
- ದೇಶದ ಯುವ ಜನತೆಯನ್ನು ಇಂಚಿಂಚಾಗಿ ಕೊಲ್ಲುತ್ತಿರುವ ಮಾದಕದ್ರವ್ಯಗಳ ವಿಷ ಜಾಲವು ಇಸ್ಲಾಮಿಕ್ ಉಗ್ರಗಾಮಿ ಚಟುವಟಿಕೆಗೆ ಆರ್ಥಿಕ ನೆರವು ನೀಡುವ ಒಂದು ವ್ಯವಸ್ಥೆಯಾಗಿದ್ದು ಇದನ್ನು ಬುಡ ಸಮೇತ ಕಿತ್ತೊಗೆಯಲು ವಿಶೇಷ ಕಾನೂನು ರಾಜ್ಯ ಸರ್ಕಾರ ರಚಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಮನವಿಯಲ್ಲಿ ಆಗ್ರಹಿಸಿದೆ..
