ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖ ಎಂಬಲ್ಲಿ ಮಹಿಳೆಯೋರ್ವರ ಮನೆಗೆ ರಾತ್ರಿ ವೇಳೆ ಅಕ್ರಮ ಪ್ರವೇಶ ಮಾಡಿ, ಜಾತಿ ನಿಂದನೆ ಮಾಡಿ,ಹಲ್ಲೆ ನಡೆಸಿ ಕೈಹಿಡಿದು ಎಳೆದು ಜೀವ ಬೆದರಿಕೆ ಒಡ್ಡಿದ ಪ್ರಕರಣ ಆ.16 ರಂದು ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೋಲಿಸರಿಂದ ಬಂಧನಕ್ಕೆ ಒಳಗಾಗಿ, ನ್ಯಾಯಾಂಗ ಬಂಧನದಲ್ಲಿದ್ದ, ಆರೋಪಿತರಿಗೆ ಪುತ್ತೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರುಗೊಳಿಸಿ ಬಿಡುಗಡೆಗೆ ಆದೇಶಿಸಿದೆ.
ಆಗಸ್ಟ್ 16ರಂದು ರಾತ್ರಿ ಮಹಿಳೆ, ತನ್ನ ಮಕ್ಕಳೊಂದಿಗೆ ಮನೆಯಲ್ಲಿರುವಾಗ, ಆರೋಪಿತರು ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ, ‘ನೀನು ನಾಯಿಯನ್ನು ಯಾಕೆ ಕಟ್ಟಿ ಹಾಕುವುದಿಲ್ಲ ನಿನ್ನ ನಾಯಿಂದಾಗಿ ನಮಗೆ ತುಂಬಾ ತೊಂದರೆ ಯಾಗಿರುತ್ತದೆ.ನೀನು ನಾಯಿಯನ್ನು ಕಟ್ಟಿ ಹಾಕದಿದ್ದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ಹೇಳಿ ಕೈಯಿಂದ ಹಲ್ಲೆ ನಡೆಸಿ, ಕೈ ಹಿಡಿದೆಳೆದು ಮಾನಹರಣ ಮಾಡಿರುವುದಾಗಿ ಆರೋಪಿಸಿ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ಗ್ರಾಮಾಂತರ ಪೊಲೀಸರು, ಆರೋಪಿಗಳ ಪೈಕಿ ಅಬ್ದುಲ್ ಖಾದರ್ ಹಾಗೂ ಮಹಮ್ಮದ್ ಕುಂಜಿ ಯನ್ನು ಬಂಧಿಸಿ ಆ. 18ರಂದು, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ನ್ಯಾಯಾಲಯ ಆ.28ರ ವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು.
ಆಪಾದಿತರ ಬಿಡುಗಡೆಗಾಗಿ, ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮಧ್ಯಂತರ ಜಾಮೀನು ಅರ್ಜಿಯನ್ನು ಸಲ್ಲಿಸಿ,ವಾದವನ್ನು ಮಂಡಿಸಿದ್ದರು. ವಾದವನ್ನು ಆಲಿಸಿ ಅರ್ಜಿಯನ್ನು ಪುರಸ್ಕರಿಸಿದ, ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆರೋಪಿತರಿಗೆ ಷರತ್ತು ಬದ್ಧ ಮಧ್ಯಾಂತರ ಜಾಮೀನು ಮಂಜೂರುಗೊಳಿಸಿದೆ.