ಮಂಗಳೂರು: ಶಿರಾಡಿ ಘಾಟಿಯಲ್ಲಿ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ರಸ್ತೆಯ ಎರಡು ಬದಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಆ.16 ರಿಂದ ಸ್ಥಗಿತಗೊಳಿಸಿ ಹಾಸನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಭೂ ಕುಸಿತವಾದ ಸ್ಥಳ ಹಾಗೂ ವಾಹನಗಳ ಸಂಚಾರದ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಹಾಸನ ಜಿಲ್ಲಾಧಿಕಾರಿ ಗಿರೀಶ್ ರವರು ಶನಿವಾರ ಭೂ ಕುಸಿತ ಉಂಟಾಗಿರುವ ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ-75ರ ದುರಸ್ತಿ ಕಾಮಗಾರಿಯ ಪರೀಕ್ಷಾ ವರದಿ ಬಂದ ನಂತರ ಶಿರಾಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ದುರಸ್ತಿ ಕಾಮಗಾರಿಯ ವೀಕ್ಷಣೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ “ತಿಂಗಳ ಹಿಂದೆ ಸುರಿದ ಮಳೆಗೆ ಹೆದ್ದಾರಿ ಬದಿಯ ಭೂಮಿ ಕುಸಿದಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ಕಳೆದೊಂದು ವಾರದಿಂದ 20 ಟನ್ ವರೆಗಿನ ವಾಹನಗಳ ಸಂಚಾರಕ್ಕೆ ಹಗಲು ವೇಳೆ ಅವಕಾಶ ನೀಡಲಾಗಿದೆ” ಎಂದರು.
ಭಾರಿ ವಾಹನಗಳ ಸಂಚಾರಕ್ಕೆ ಹಾಗೂ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಲು ಈಗಾಗಲೇ ಹೆದ್ದಾರಿ ಇಲಾಖೆಯಿಂದ ದುರಸ್ತಿ ಕಾಮಗಾರಿ ಪರೀಕ್ಷಾ ವರದಿ ಕೇಳಿದ್ದು, ಇನ್ನೆರಡು ದಿನಗಳಲ್ಲಿ ಬರಲಿದೆ. ನಂತರ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು” ಎಂದರು.
ಬಳಿಕ ಅವರಿಬ್ಬರು ಬಿಸಿಲೆ ಘಾಟ್ ರಸ್ತೆಯನ್ನೂ ಪರಿಶೀಲಿಸಿದರು. ಈ ಸಂದರ್ಭ ಪುತ್ತೂರು ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
ಲಾರಿ ಚಾಲಕರು ತಮ್ಮನ್ನು ಈ ರಸ್ತೆ ಮೂಲಕ ಬಿಡುವಂತೆ ನಿನ್ನೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿದರು.