ಬೆಂಗಳೂರು :ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷಾಂತರ ರೂ.ಚಿನ್ನದ ಬ್ಯಾಗ್ ಎಗರಿಸಿದ್ದ ಕಳ್ಳಿಯನ್ನು ಸೆರೆ ಹಿಡಿಯುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶ ಮೂಲದ ಮಮತಾ (38)ಬಂಧಿತೆ. ಈಕೆಯ ಪತಿಯೂ ಕೃತ್ಯದಲ್ಲಿ ಭಾಗಿಯಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾನೆ. ಆಗಸ್ಟ್ 19, 20,ರಂದು ಆರೋಪಿ ದಂಪತಿಗಳು ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಯಾತ್ರೆಕೈಗೊಂಡಿದ್ದರು.
ಆಗ ಮಹಿಳಾ ಯಾತ್ರಿಯೊಬ್ಬರ ಬ್ಯಾಗ್ ಕಳವು ಮಾಡಿದ್ದರು. ಆಕೆಯಿಂದ 20.2 ಲಕ್ಷರೂ. ಮೌಲ್ಯದ 439 ಗ್ರಾಂ.ಚಿನ್ನ ಜಪ್ತಿಮಾಡಲಾಗಿದೆ.

ಆರೋಪಿ ಮಮತಾಳ ಮೊದಲ ಪತಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದು ಹತ್ತಿರದ ಸಂಬಂಧಿ ಜತೆ ಸಲುಗೆ ಬೆಳೆಸಿಕೊಂಡು ಇತ್ತೀಚೆಗೆ ಮದುವೆಯಾಗಿದ್ದಳು. ವಿವಾಹದ ಬಳಿಕ ಪತಿಯೊಂದಿಗೆ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿ ಬೆಂಗಳೂರಿಗೆ ಹೋಗಿ ಜೀವನ ನಡೆಸಲು ನಿರ್ಧರಿಸಿದ್ದೆವು ಎಂದು ಆಕೆ ಪೊಲೀಸರ ಎದುರು ಬಾಯ್ದಿಟ್ಟಿದ್ದಾಳೆ.
ಇದೀಗ ಮದುವೆಯಾಗಿ ಹೊಸ ಜೀವನ ಆರಂಭಿಸಲು ಹಣದ ಅವಶ್ಯಕತೆ ಇದ್ದ ಕಾರಣ ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಯ ವೇಳೆ ಬ್ಯಾಗ್ ಕಳವು ಮಾಡಿ ದಂಪತಿ ಪರಾರಿಯಾಗಿದ್ದರಂತೆ.
ನಿರ್ಜನ ಪ್ರದೇಶದಲ್ಲಿ ಬ್ಯಾಗ್ ತೆರೆದಾಗ ಅದರಲ್ಲಿ ಬೆಲೆ ಬಾಳುವ ಚಿನ್ನಾಭರಣ ಪತ್ತೆಯಾಗಿದೆ. ಖುಷಿಯಿಂದ ಬೆಂಗಳೂರಿಗೆ ಬಂದ ಇವರು ಲಗ್ಗರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ್ತವ್ಯ ಹೂಡಿದ್ದಾರೆ.
ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ ಸಣ್ಣ ಭಾಗವನ್ನು ಅಡವಿಟ್ಟು ದೈನಂದಿನ ಬದುಕು ಸಾಗಿಸುತ್ತಿದ್ದರು. ಆಗಸ್ಟ್ 25 ರಂದು ದಂಪತಿ ಯಶವಂತಪುರ ಎಸ್.ಕೆ. ಜುವೆಲ್ಲರಿ ಬಳಿ ಚಿನ್ನ ಮಾರಾಟಕ್ಕೆ ಪ್ರಯತ್ನಿಸಿದಾಗ ಅಂಗಡಿ ಮಾಲಕರಿಗೆ ಅನುಮಾನ ಬಂದು ಗಸ್ತು ಪೊಲೀಸರನ್ನು ಕರೆಸಿದ್ದಾರೆ.
ಆಗ ಪತಿ ಅಲ್ಲಿಂದ ಪರಾರಿಯಾಗಿದ್ದ. ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಮಮತಾಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಚಿನ್ನದ ಅಂಗಡಿಗಳಲ್ಲಿ ಅಡವಿಟ್ಟ 10 ರಸೀದಿಗಳು, 2 ಚಿನ್ನದ ಉಂಗುರ ಪತ್ತೆಯಾಗಿವೆ.
ಚಿನ್ನವನ್ನು ಕುಕ್ಕೆಯಲ್ಲಿ ಕಳವು ಮಾಡಿರುವ ವಿಷಯ ಬಾಯಿ ಬಿಟ್ಟಿದ್ದಾಳೆ . ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರವಾಸಿಗರ ಸೋಗಿನಲ್ಲಿ ಬರುತ್ತಿದ್ದ ಈಕೆ ಚಿನ್ನಾಭರಣ ಕದಿಯುತ್ತಿದ್ದಳು.ದೇವರ ದರ್ಶನದ ವೇಳೆ ಜನರ ಬ್ಯಾಗ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು ಎಂಬ ಮಾಹಿತಿ ಇದೆ.
ಕಳ್ಳತನದ ಬಳಿಕ ಬೆಂಗಳೂರಿಗೆ ಬಂದು ಚಿನ್ನ ಅಡವಿಟ್ಟು ಸಾಲಪಡೆದು ಕೊಳ್ಳುತ್ತಿದ್ದಳು. ಸದ್ಯ ಪೊಲೀಸರಿಗೆ ತನಿಖೆ ವೇಳೆ ಕುಕ್ಕೆ ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನೇರವಾಗಿ ಈಕೆ ಭಾಗಿಯಾಗಿರುವುದು ಕಂಡುಬಂದಿದೆ.