ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಲು ‘ರಾಣಿ’ ಎಂಬ ಶ್ವಾನವನ್ನು ನಿಯೋಜನೆ ಮಾಡಿದ್ದಾರೆ.

ಲ್ಯಾಬ್ರಡಾರ್ ತಳಿಯ ರಾಣಿ ಹೆಸರಿನ ಶ್ವಾನವು ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದು, ಸದ್ಯ ಇದರ ತರಬೇತಿ ಮುಗಿದು ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿದೆ.
ಸಿಟಿ ಆರ್ಮ್‌ಡ್ ರಿಸರ್ವ್ ಪೋರ್ಸ್‌ನ ಸಿಬ್ಬಂದಿ ಮನೋಜ್ ಶೆಟ್ಟಿ ಮತ್ತು ನಾಗೇಂದ್ರರವರು ಇದನ್ನು ನಿರ್ವಹಣೆ ನಡೆಸಲಿದ್ದಾರೆ. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸ್ಫೋಟಕ ಪತ್ತೆ ಬಗ್ಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಎರಡು ತಿಂಗಳ ಹಿಂದೆ ಇದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಧಾ ಎಂಬ ಶ್ವಾನ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿತ್ತು. ಇದೀಗ ಅದೇ ವಿಭಾಗಕ್ಕೆ ರಾಣಿ ಸೇರ್ಪಡೆಗೊಂಡಿದ್ದಾಳೆ. ಜೊತೆಗೆ ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಉಗ್ರರ ಕರಿನೆರಳು ಬಿದ್ದಿದ್ದು, ಮುಂಬರುವ ಹಬ್ಬಗಳ ದಿನದಂದು ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಮಧ್ಯೆ ರಾಣಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾಳೆ.






























