ಮಂಗಳೂರು: ಅಪ್ಪನೇ ಮಗನ ಮೇಲೆ ಫೈರಿಂಗ್ ಮಾಡಿದ ಘಟನೆ ಅ.5 ರಂದು ಮಂಗಳೂರು ನಗರದ ಮೋರ್ಗನ್ಸ್ಗೇಟ್ ಸಮೀಪ ನಡೆದಿತ್ತು. ಗುಂಡಿನ ದಾಳಿಗೆ ಒಳಗಾದ ಬಾಲಕ ಸುಧೀಂದ್ರ ಪ್ರಭು (14) ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಗಾಯಾಳು ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ರಾಜೇಶ್ ಪ್ರಭು, ಮಗನ ಮೇಲೆ ಗುಂಡು ಹಾರಿಸಿದ್ದರು
ಶೂಟೌಟ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಚೇರಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿದೆ. ಈ ಘಟನೆ ಮಂಗಳೂರಿನ ಮೋರ್ಗನ್ಸ್ಗೇಟ್ ಬಳಿಯ ವೈಷ್ಣವಿ ಕಾರ್ಗೋ ಸಂಸ್ಥೆಯಲ್ಲಿ ನಡೆದಿದ್ದು, ಸೆರೆಯಾದ ದೃಶ್ಯವಳಿಗಳ ಪ್ರಕಾರ ಸಿಬ್ಬಂದಿ ಮೇಲಿನ ಕೋಪಕ್ಕೆ ತಂದೆಯೇ ಮಗನ ಮೇಲೆ ಗುಂಡು ಹಾರಿಸಿರುವುದಾಗಿ ತಿಳಿದು ಬಂದಿದೆ.
ವೇತನದ ವಿಚಾರಕ್ಕೆ ಮಾಲೀಕ ರಾಜೇಶ್ ಪ್ರಭು ಬಳಿ ಚಂದ್ರು ಮತ್ತು ಅಶ್ರಫ್ ಎಂಬ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ರಾಜೇಶ್ ಪುತ್ರ ಸುಧೀಂದ್ರ ಪ್ರಭು ಸಿಬ್ಬಂದಿ ಜೊತೆ ಜಗಳಕ್ಕಿಳಿದಿದ್ದಾರೆ. ಸುಧೀಂದ್ರ ಪ್ರಭು ಮತ್ತು ಇಬ್ಬರು ಸಿಬ್ಬಂದಿ ಮಧ್ಯೆ ಕಚೇರಿ ಹೊರಗೆ ಹೊಡೆದಾಟ ನಡೆದಿದೆ. ಆಗ ರಾಜೇಶ್ ಕಚೇರಿ ಒಳಗಿಂದ ತನ್ನ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರಬಂದರು. ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸಿದರು ಎನ್ನಲಾಗಿದೆ.