ಬಂಟ್ವಾಳ: ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳು ವಾಹನ ನಿಲ್ಲಿಸಲು ಸೂಚಿಸಿದಾಗ ವಾಹನಗಳನ್ನು ನಿಲ್ಲಿಸದೆ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ವಾಹನದಿಂದ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಫರಂಗಿಪೇಟೆ ಬಳಿ ಅ.19 ರಂದು ಮಧ್ಯರಾತ್ರಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಸಿಬ್ಬಂದಿಗಳು ವಾಹನ ಚಾಲಕರ ಮೇಲೆ ದೂರು ನೀಡಿದ್ದಾರೆ.
ಅ.19 ರಂದು ಮಧ್ಯರಾತ್ರಿ ಫರಂಗೀಪೇಟೆ ಹೊರಠಾಣೆ ಮತ್ತು ಚೆಕ್ ಪೋಸ್ಟ್ ಬಳಿ ಕರ್ತವ್ಯಕ್ಕೆ ನೇಮಿಸಿದ್ದ ಸಿಬ್ಬಂದಿಗಳು ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಪಾಸಣೆ ಮಾಡಿಕೊಂಡಿದ್ದ ಸಮಯದಲ್ಲಿ ಮಂಗಳೂರು ಕಡೆಯಿಂದ ಟಿಪ್ಪರ್ ಲಾರಿಯೊಂದು ವೇಗವಾಗಿ ಬಂದಿದ್ದು, ದೂರದಿಂದಲೇ ಟಿಪ್ಪರ್ ಲಾರಿ ವೇಗವಾಗಿ ಬರುತ್ತಿರುವುದನ್ನು ಕಂಡು ಬ್ಯಾಟನ್ ಹಾಗೂ ಟಾರ್ಚ್ ಲೈಟ್ ಸಹಾಯದಿಂದ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕೆಎ51ಸಿ6229 ನ ಟಿಪ್ಪರ್ ಲಾರಿ ಚಾಲಕನು ಟಿಪ್ಪರ್ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಟಿಪ್ಪರ್ ಲಾರಿಯನ್ನು ಪೋಲಿಸ್ ಸಿಬ್ಬಂದಿಯಾದ ಶೇಖರ್ ಚೌಗಾಲಾ ರವರ ಮೇಲೆ ಹತ್ತಿಸಲು ಮುಂದಾಗಿದ್ದು, ಆ ಸಮಯ ಶೇಖರ್ ಹಾಗೂ ಹೋಮ್ ಗಾರ್ಡ್ ಕೂಡಲೇ ತಪ್ಪಿಸಿಕೊಂಡು ಬದಿಗೆ ಸರಿದಿದ್ದು , ಟಿಪ್ಪರ್ ಲಾರಿಯನ್ನು ಅದರ ಚಾಲಕನು ಚೆಕ್ ಪೋಸ್ಟ್ ನ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದಾನೆ.
ನಂತರ ಅದರ ಹಿಂದೆಯೇ ಮಂಗಳೂರು ಕಡೆಯಿಂದ ಕೆಎ-19-ಎಂಸಿ 2269 ನ ಆಲ್ಟೋ ಕಾರೊಂದನ್ನು ಅದರ ಚಾಲಕನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಅದು ಕೂಡ ಸೂಚನೆಗೆ ನಿಲ್ಲಿಸದೇ ಕಾರಿನಲ್ಲಿ ಡ್ರೈವರ್ ಪಕ್ಕದಲ್ಲಿ ಕುಳಿತ್ತಿದ್ದವನು “ನಿಮಗೆ ಎಷ್ಟು ಧೈರ್ಯ ನಮ್ಮ ಲಾರಿಯನ್ನು ನಿಲ್ಲಿಸುತ್ತೀರಾ ಲೋಪರ್ಸ್ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಾರನ್ನು ನಿಲ್ಲಿಸದೇ ಹೋಗಿದ್ದಾನೆ. ಲಾರಿಯನ್ನು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದಲ್ಲದೇ ಇಲಾಖಾ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಸಿ ಅದನ್ನು ಜಖಂಗೊಳಿಸಿ ರೂ 2000/- ದಷ್ಟು ನಷ್ಟ ಉಂಟು ಮಾಡಿರುವುದಲ್ಲದೇ ಆ ಟಿಪ್ಪರ್ ಲಾರಿಯ ಹಿಂದಿನಿಂದ ಬಂದ ಆಲ್ಟೋ ಕಾರಿನ ಚಾಲಕನು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೇ ವೇಗವಾಗಿ ಚಲಾಯಿಸಿ ಅದರ ಚಾಲಕ ಹಾಗೂ ಇನ್ನೋರ್ವ ಅವಾಚ್ಯ ಶಬ್ದಗಳಿಂದ ಬೈದಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ 121-2021 ಕಲಂ: 279,353,307,504,ಜೊತೆಗೆ 34 ಐಪಿಸಿ ಮತ್ತು 2ಎ ಕೆಪಿಡಿಎಲ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.