ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟದಲ್ಲಿ ನಡೆದ ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದಾರೆ.
ಮೃತ ವಿದ್ಯಾರ್ಥಿನಿ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ ಅವರು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಮೇ 8ರಂದು ಅರ್ಪಿತಾ (15), ಸುನೀತಾ (21), ಅಕ್ಷತಾ ಹಾಗೂ ನೆಟ್ಟಣ ನಿವಾಸಿ ಶ್ರೇಯಾ ಸೇರಿದಂತೆ ಕೆಲವರು ಕೊಲ್ಯದಕಟ್ಟದ ಗುಂಡ್ಯ ಹೊಳೆಗೆ ಸ್ನಾನಕ್ಕೆ ತೆರಳಿದ್ದರು.
ಸಂಜೆ ಸುಮಾರು 4.30ರ ವೇಳೆಗೆ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಅರ್ಪಿತಾ ಮತ್ತು ಸುನೀತಾ ನೀರಿನ ಆಳ ತಿಳಿಯದೆ ಮುಳುಗತೊಡಗಿದ್ದಾರೆ ಎಂದು ತಿಳಿದುಬಂದಿದೆ. ಜೊತೆಯಲ್ಲಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಸ್ಥಳೀಯ ನಿವಾಸಿ ಜಾರ್ಜ್ ಅವರು ನೀರಿನಲ್ಲಿ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತದೇಹಗಳನ್ನು ಕಡಬ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



























