ಪುತ್ತೂರು: ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬೆಳ್ಳಿಪ್ಪಾಡಿಯ ಕೊಡೀಲು ನಿವಾಸಿ ಸಿಲ್ವೆಸ್ಟರ್ ವೇಗಸ್ ಅವರು ದ.ಕ. ಹಾಲು ಉತ್ಪಾದಕರ ಸಹಕಾರ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯಲ್ಲಿ ಮನವಿ ಸಲ್ಲಿಸಲಾಗಿದ್ದು ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎ. ಮುರಳೀಧರ ರೈ ಮಠಂತಬೆಟ್ಟು, ಹಾಲಿ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಜಯಪ್ರಕಾಶ್ ಬದಿನಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿಲ್ವೆಸ್ಟರ್ ವೇಗಸ್ ಅವರು ತಮ್ಮ ಮನವಿಯಲ್ಲಿ ‘ನಾನು ಕೃಷಿ ಭೂಮಿ ಹೂಂದಿರುತ್ತೇನೆ. ಅಲ್ಲದೆ ಹೈನುಗಾರಿಕೆ ಮಾಡಿಕೊಂಡಿರುತ್ತೇನೆ. ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಆರಂಭವಾಗುವ ಸಂದರ್ಭ ನಾವುಗಳು ಮುತುವರ್ಜಿ ವಹಿಸಿ ದೇಣಿಗೆ ನೀಡಿ ಶ್ರಮ ವಹಿಸಿರುತ್ತೇವೆ. ಸದ್ರಿ ಸಂಘದಲ್ಲಿ ಇತ್ತೀಚಿನ ದಿನಗಳಲ್ಲಿ ಅವ್ಯವಹಾರವಾಗುತ್ತಿದ್ದು, 2020-2021ನೇ ಸಾಲಿನ ಒಂದೇ ವರ್ಷದಲ್ಲಿ ಸುಮಾರು ರೂ 10 ಲಕ್ಷಕ್ಕೂ ಮಿಕ್ಕಿ ಹಣದ ಅವ್ಯವಹಾರ ಬಹಿರಂಗವಾಗಿರುತ್ತದೆ. ಸಂಘಕ್ಕೆ ಬರಬೇಕಾದ ಹೆಚ್ಚುವರಿ ಹಾಲಿನ ಮೊತ್ತವನ್ನು ಕಾರ್ಯದರ್ಶಿಯವರ ಖಾತೆಗೆ ಜಮೆ ಮಾಡಿಕೊಳ್ಳಲಾಗಿದೆ. ಸಂಘದ ಆಡಳಿತ ಮಂಡಳಿಯು ಈ ವಿಚಾರವನ್ನು ಗೌಪ್ಯವಾಗಿರಿಸಿ ಅದೇ ಕಾರ್ಯದರ್ಶಿಯವರನ್ನು ಮುಂದುವರಿಸುತ್ತಿದೆ. ಆ ಕಾರಣ ಆಡಳಿತ ಮಂಡಳಿ ಅಧ್ಯಕ್ಷರು ಇದರಲ್ಲಿ ಶಾಮಿಲಾಗಿರುವ ಸಂಶಯ ಇರುತ್ತದೆ. ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಹೆಚ್ಚಿನವರು ತಿಂಗಳ ಸಭೆಗೆ ಹಾಜರಾಗದೇ, ಜಮಾ – ಖರ್ಚಿನ ಪರಿಶೀಲನೆ ಮಾಡದೆ,ಸಂಘಕ್ಕೆ ಬಂದಾಗ ಸಭೆಯ ಪುಸ್ತಕಕ್ಕೆ ಸಹಿ ಮಾಡುತ್ತಾರೆ.
ನಾನು ಈ ಸಂಘದ ಸ್ಥಾಪಕ ಸದಸ್ಯನಾಗಿದ್ದು, ಸದ್ರಿ ನನ್ನ ಹೆಂಡತಿಯ ಹೆಸರಿನಲ್ಲಿ ಸಂಘಕ್ಕೆ ಹಾಲು ಹಾಕುತ್ತಿದ್ದೇನೆ. ತಾವುಗಳು ದಯವಿಟ್ಟು ಪರಿಶೀಲಿಸಿ ಸಂಘಕ್ಕೆ ಮತ್ತು ಸಂಘದ ಸದಸ್ಯರಿಗೆ ಹಿಂದಿನಿಂದಲೂ ಆಗಿರುವ ವಂಚನೆಯನ್ನು ಬಯಲಿಗೆಳೆದು ನ್ಯಾಯ ಒದಗಿಸಿಕೊಡುವಿರೆಂದು ನಂಬಿರುತ್ತೇನೆ’ ಎಂದು ಒತ್ತಾಯಿಸಿದ್ದಾರೆ.