ಬಂಟ್ವಾಳ: ಕ್ಯಾಟರಿಂಗ್ ವೊಂದರ ಆಹಾರ ಸಾಗಾಟದ ಪಿಕಪ್ ಮರಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ರಾ. ಹೆ.75 ರ ತುಂಬೆ ರಾಮಲಕಟ್ಟೆಯಲ್ಲಿ ನಡೆದಿದ್ದು, ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (21ವ.) ಮತ್ತು ಆಶಿಕ್ (21ವ.) ಮೃತಪಟ್ಟಿದ್ದಾರೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿನ ಕ್ಯಾಟರಿಂಗ್ ವೊಂದರ ವಾಹನ ಇದಾಗಿದ್ದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಳಗ್ಗೆ ಆಹಾರ ಪೂರೈಸಿ ಸಂಜೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಾರ್ಯ ಗ್ರಾಮದ ಪೆರಿಯೊಟ್ಟು ಪಿಲಿಗೂಡಿನ ದಿ. ಧರ್ನಪ್ಪ ಪೂಜಾರಿ, ವಿಮಲಾ ದಂಪತಿಯ ಪುತ್ರನಾದ ಚೇತನ್ (21) ಬಡತನದ ಕುಟುಂಬದಿಂದ ಬಂದಿದ್ದು, ತಂದೆಯ ಸಾವಿನ ನಂತರ ತಾಯಿಯ ಬೀಡಿ ಕಸುಬು ಇವರ ಜೀವನಕ್ಕೆ ಆಧಾರವಾಗಿತ್ತು. ಬಡತನದ ನಡುವೆಯೂ ಬಿಡುವಿರುವಾಗ ಕೆಲಸಕ್ಕೆ ಹೋಗಿ ಇತ್ತೀಚೆಗಷ್ಟೇ ಡಿಪ್ಲೊಮಾ ಶಿಕ್ಷಣವನ್ನು ಮುಗಿಸಿದ್ದ ಚೇತನ್ ಕೆಲಸದ ಹುಡುಕಾಟದಲ್ಲಿದ್ದ. ಈ ನಡುವೆ ಬಿ.ಸಿ.ರೋಡ್‌ನ ಕ್ಯಾಟರಿಂಗ್ ವೊಂದರಲ್ಲಿ ದುಡಿದು ತನ್ನ ಮನೆಯವರಿಗೆ ನೆರವಾಗುತ್ತಿದ್ದರು. ಆದರೇ ವಿಧಿಯ ಕ್ರೂರತೆ ಅವರನ್ನು ಬಲಿತೆಗೆದುಕೊಂಡಿದೆ. ಮನೆಗೆ
ಬೆಳಕಾಗ ಬೇಕಿದ್ದ ಏಕೈಕ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸಾವಿನಲ್ಲೂ ಒಂದಾದ ಗೆಳೆಯರು:
ಮೃತ ಚೇತನ್ ಮತ್ತು ಆಶಿಕ್ ಇಬ್ಬರು ಗೆಳೆಯರಾಗಿದ್ದು, ಮೃತ ಆಶೀಕ್ ಉಪ್ಪಿನಂಗಡಿಯ ನಟ್ಟಿಬೈಲ್ ನಿವಾಸಿಯಾಗಿದ್ದು, ಮಮತಾ ಎಂಬವರ ಪುತ್ರ.
ಆಶಿಕ್ ಮೂವರು ಮಕ್ಕಳಲ್ಲಿ ಹಿರಿಯವನಾಗಿದ್ದು, ಬಂಟ್ವಾಳದಲ್ಲಿ ಡಿಪ್ಲೋಮ ಶಿಕ್ಷಣ ಪೂರೈಸುತ್ತಿದ್ದ. ರಜಾ ದಿನಗಳಲ್ಲಿ ಪೆರ್ನೆಯ ಕ್ಯಾಟರಿಂಗ್ ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ಇಂದು ತನ್ನ ಗೆಳೆಯ ಚೇತನ್ ಕರೆದನೆಂದು ಬಿ.ಸಿ.ರೋಡಿನ ಕ್ಯಾಟರಿಂಗ್ ಗೆ ಗೆಳೆಯರೊಂದಿಗೆ ಕೆಲಸಕ್ಕೆ ತೆರಳಿದ್ದ. ಆದರೇ ಹಿಂದಿರುಗುವಾಗ ದಾರಿ ಮಧ್ಯೆ ನಡೆದಿದ್ದೇ ಬೇರೆ.. ಜೀವಕ್ಕೆ ಜೀವ ಎನ್ನುತ್ತಿದ್ದ ಆತ್ಮೀಯ ಗೆಳೆಯರ ಜೀವವೇ ದಾರುಣ ದುರಂತವೊಂದರಲ್ಲಿ ಜೀವ ಕಳೆದುಕೊಳ್ಳುವಂತಾಗಿದೆ.
ಅವರಿಬ್ಬರೂ ಆತ್ಮೀಯ ಸ್ನೇಹಿತರು. ಸದಾ ಜತೆಗೇ ಇರಬೇಕು, ಜೀವನದಲ್ಲಿ ಏನಾದರೂ ಜತೆಗೆ ಮುನ್ನಡೆಯಬೇಕೆನ್ನುತ್ತಿದ್ದ ಸ್ನೇಹಿತರು ಸಾವಿನಲ್ಲೂ ಜತೆಯಾಗುತ್ತಾರೆ ಎನ್ನುವ ಆಲೋಚನೆಯೂ ಇರಲಿಕ್ಕಿಲ್ಲ ಎಂದೆಲ್ಲಾ ಬರೆದು ಸಾವಿನಲ್ಲೂ ಒಂದಾದ ಸ್ನೇಹಿತರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ…