ಬೆಳ್ತಂಗಡಿ: ಸರ್ಕಾರಿ ಶಾಲಾ ಆಟದ ಮೈದಾನವನ್ನು 23 ಕುಟುಂಬಗಳು ಕಾನೂನು ಬಾಹಿರವಾಗಿ ಅತಿಕ್ರಮಿಸಿದ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಪಂ ವ್ಯಾಪ್ತಿಯ ಪಡ್ಡಂದಡ್ಕ ನಡೆದಿದ್ದು, ಸ್ಥಳಕ್ಕೆ ನ.16 ರಂದು ಭೇಟಿ ಪುತ್ತೂರು ಉಪವಿಭಾಗೀಯ ಅಧಿಕಾರಿ ಡಾ. ಯತೀಶ್ ಉಳ್ಳಾಲ್ ನೇತೃತ್ವದ ಅಧಿಕಾರಿಗಳ ತಂಡದಿಂದ ತೆರವು ಕಾರ್ಯಚರಣೆ ನಡೆಯಿತು.
ವೇಣೂರು ಗ್ರಾ.ಪಂ.ನ ಕರಿಮಣೇಲು ವ್ಯಾಪ್ತಿಯ 2.30 ಎಕರೆ ಜಾಗವನ್ನು ಈ ಹಿಂದೆಯೇ ಪಡ್ಡಂದಡ್ಕ ಸರ್ಕಾರಿ ಶಾಲಾ ಆಟದ ಮೈದಾನಕ್ಕೆಂದು ಮೀಸಲಿರಿಸಿ ಪಹಣಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ 23 ಕುಟುಂಬಗಳು ಆಟದ ಮೈದಾನವನ್ನು ಅತಿಕ್ರಮಿಸಿ ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಟೆಂಟ್ ನಿರ್ಮಿಸಿತ್ತು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗೀಯ ಅಧಿಕಾರಿ ಡಾ. ಯತೀಶ್ ಉಳ್ಳಾಲ್, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್, ವೇಣೂರು ಹೋಬಳಿ ಕಂದಾಯ ಅಧಿಕಾರಿ ರವಿ ನೇತೃತ್ವದಲ್ಲಿ ಸ್ಥಳ ತನಿಖೆ ನಡೆಸಿದಾಗ ಅತಿಕ್ರಮಣ ಬೆಳಕಿಗೆ ಬಂದಿದೆ. ಅತಿಕ್ರಮಿತ ಸ್ಥಳವನ್ನು ತಕ್ಷಣದಲ್ಲಿ ತೆರವುಗೊಳಿಸಿ ಶಾಲಾ ಆಟದ ಮೈದಾನಕ್ಕೆ ಕರಿಮನೆಲು ವ್ಯಾಪ್ತಿಯ 2.30 ಎಕರೆ ಜಾಗವನು ಬಿಟ್ಟುಕೊಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ವಿವಿಧ ಭಾಗದಲ್ಲಿ ಕಂದಾಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿರುವ ಪ್ರಕರಣ ದಾಖಲಾಗಿದ್ದು, ಈ ಪ್ರಕರಣವನ್ನು ಪುತ್ತೂರು ಉಪವಿಭಾಗೀಯ ಅಧಿಕಾರಿಯವರ ವಿಶೇಷ ನ್ಯಾಯಾಲಯದಲ್ಲಿ ತನಿಖೆ ನಡೆಸಲು ತೀರ್ಮಾನಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ 10 ಎಕರೆ, ಪುತ್ತಿಲದಲ್ಲಿ 3.5 ಎಕರೆ, ಕಳಂಜದಲ್ಲಿ 5.8 ಹಾಗೂ 4.7ಗ ಎಕರೆ, ಮಚ್ಚಿನ 2.77 ಹಾಗೂ 2 ಎಕರೆ, ಸವಣಾಲು 5 ಎಕರೆ ಭೂಮಿ ಅತಿಕ್ರಮಣಗೊಂಡಿದ್ದು, ವಿಶೇಷ ನ್ಯಾಯಾಲಯದಲ್ಲಿ ತನಿಖೆ ನಡೆಸಲು ಕಂದಾಯ ಇಲಾಖೆ ತೀರ್ಮಾನಿಸಿದೆ.