ಮಂಗಳೂರು: ರಿಕ್ಷಾ ಚಾಲಕನೊಬ್ಬ ಮತ್ತೋರ್ವ ರಿಕ್ಷಾ ಚಾಲಕನ ಮನೆ ಆವರಣಕ್ಕೆ ನುಗ್ಗಿ ಕೊಲೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದಾತನಿಗೂ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಕುಂಪಲ ಹನುಮಾನ್ ನಗರದಲ್ಲಿ ನಡೆದಿದೆ.
ಸುನಿಲ್ ಎಂಬಾತ ಇರಿತದಿಂದ ಗಂಭೀರ ಗಾಯಗೊಂಡಿದ್ದು, ತಡೆಯಲು ಬಂದ ಇನ್ನೊಬ್ಬ ಆಟೋ ರಿಕ್ಷಾ ಚಾಲಕ ಜಯ ಪ್ರಕಾಶ್ ಸಣ್ಣಪುಟ್ಟ ಇರಿತಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಕುಂಪಲ ಬಗಂಬಿಲ ನಿವಾಸಿ ರೋಕೆಶ್ ಯಾನೆ ರೋಸ್ ಎಂಬಾತನು ತನ್ನ ಗೆಳೆಯ ದುರ್ಗೇಶ್ ಜೊತೆ ಆಟೋ ರಿಕ್ಷಾದಲ್ಲಿ ಹನುಮಾನ್ ನಗರದ ಸುನಿಲ್ ಎಂಬವರ ಮನೆ ಆವರಣಕ್ಕೆ ರಾತ್ರಿ ನುಗ್ಗಿ ಧಾಂದಲೆ ನಡೆಸಿದ್ದಾನೆ.
ಸುನಿಲ್‌ನನ್ನು ಮನೆಯಿಂದ ಹೊರಗೆ ಕರೆದ ರೋಕೇಶ್ ಚಾಕುವಿನಿಂದ ತೋಳು, ಹೊಟ್ಟೆ, ಕಾಲು, ಬೆನ್ನಿಗೆ ಇರಿದಿದ್ದಾನೆನ್ನಲಾಗಿದೆ. ಗಲಾಟೆಯನ್ನ ತಡೆಯಲು ಬಂದ ಸುನಿಲ್‌ನ ಸ್ನೇಹಿತ ಜಯ ಪ್ರಕಾಶ್ ಎಂಬವರಿಗೂ ಇರಿದಿದ್ದು, ಗಾಯಾಳುಗಳು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೋಕೇಶ್ ಯಾನೆ ರೋಸ್, ಸುನಿಲ್, ಜಯ ಪ್ರಕಾಶ್ ಕುಂಪಲ ಬೈಪಾಸ್ ರಿಕ್ಷಾ ಪಾರ್ಕ್‌ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದಾರೆ.
ವೈಯಕ್ತಿಕ ವಿಚಾರವನ್ನೇ ಮುಂದಿಟ್ಟು ರೋಕೇಶ್ ರಾತ್ರಿ ಸ್ನೇಹಿತ ದುರ್ಗೇಶ್ ಜತೆಗೂಡಿ ಸುನಿಲ್ ನನ್ನು ಇರಿದಿದ್ದಾನೆ ಎನ್ನಲಾಗಿದೆ. ರೋಸ್ ಯಾನೆ ರೋಕೇಶ್ ಮತ್ತು ದುರ್ಗೇಶ್ ತಲೆಮರೆಸಿದ್ದು, ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.