ಪುತ್ತೂರು: ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಬೃಹತ್ ಮರವೊಂದು ರಸ್ತೆಯ ಬದಿಯಲ್ಲಿರುವ ವಿದ್ಯುತ್ ತಂತಿಯ ಮೇಲೆ ವಾಲಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಪಘಾತ ವಲಯವಾಗಿದ್ದ ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ಲೋಕೋಪಯೋಗಿ ಇಲಾಖೆಯ 2021-22 ಸಾಲಿನ ಯೋಜನೆಯಲ್ಲಿ 3ಕೋಟಿ ರೂ.ವೆಚ್ಚದ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ಭಾಗದಲ್ಲಿ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿದ್ದ ವಿದ್ಯುತ್ ಕಂಬಗಳನ್ನು ಮೆಸ್ಕಾಂನವರು ಸ್ಥಳಾಂತರಿಸಿದ್ದರು.
ಆದರೇ ಅಲ್ಲಿ ಕಾಮಗಾರಿಗೆ ಅಡ್ಡಿಯುಂಟು ಮಾಡುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಹಲವು ಭಾರಿ ಮನವಿ ಮಾಡಿದ್ದರು ಇಲಾಖೆಯವರು ಮರ ತೆರವುಗೊಳಿಸಿಲ್ಲ ಇದಕ್ಕೆ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೃಹತ್ ದೂಪದ ಮರ ವಾಲಿ ವಿದ್ಯುತ್ ಎಚ್.ಟಿ ತಂತಿಯ ಮೇಲೆ ಬಿದ್ದಿದ್ದು ಭಾರಿ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ. ಇದರಿಂದಾಗುವ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿದೆ.