ಉಳ್ಳಾಲ: ಕೋಪಿಸಿಕೊಂಡು ಸಮುದ್ರಕ್ಕೆ ಹಾರಿದ ಪ್ರೇಯಸಿಯನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ ಯುವಕನೋರ್ವ ಸಮುದ್ರದ ತೀವ್ರ ಸೆಳತಕ್ಕೆ ಸಿಲುಕಿದ ಕಾರಣ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ನಡೆದಿದೆ.
ಮೃತ ಯುವಕನನ್ನು ರಾಣಿಪುರದ ಲಾಯ್ಡ್ ಡಿಸೋಜ (28) ಎಂದು ಗುರುತಿಸಲಾಗಿದೆ.
ಯುವಕನೋರ್ವ ಇಬ್ಬರು ಯುವತಿಯರ ಜೊತೆ ಬೆಳೆಸಿದ ಪ್ರೇಮ ವಿಚಾರಕ್ಕೆ ಸಂಬಂಧಿಸಿ ಉಂಟಾದ ಕಲಹದಲ್ಲಿ ಯುವತಿಯೋರ್ವಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಈ ಘಟನೆ ನಡೆದಿದೆ.
ರಾಣಿಪುರದ ಲಾಯ್ಡ್ ಡಿಸೋಜ ಪನೀರ್ ನಿವಾಸಿ ಅಶ್ವಿತ ಪೆರಾವೊ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದರ ಜೊತೆಗೆ ಚೆಂಬುಗುಡ್ಡೆ ನಿವಾಸಿ ಯುವತಿಯೋರ್ವಳನ್ನು ಕೂಡಾ ಪ್ರೀತಿಸುತ್ತಿದ್ದ ಎನ್ನಲಾಗಿದೆ.
ಈ ವಿಚಾರ ತಿಳಿದ ಅಶ್ವಿತ ಪೆರಾವೊ ಲಾಯ್ಡ್ ಜತೆ ಜಗಳವಾಡಿದ್ದಳೆನ್ನಲಾಗಿದೆ. ಸಮಸ್ಯೆ ಸರಿಪಡಿಸಲು ಸೋಮೇಶ್ವರದಲ್ಲಿ ಮಾತುಕತೆ ನಡೆಸುವ ಉದ್ದೇಶದಿಂದ ಲಾಯ್ಡ್ ಡಿಸೋಜ ಇಬ್ಬರನ್ನು ಕರಕೊಂಡು ಸೋಮೇಶ್ವರಕ್ಕೆ ಬಂದಿದ್ದು, ಈ ವೇಳೆ ಅಸಮಾಧಾನಗೊಂಡ ಅಶ್ವಿತ ಪೆರಾವೊ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಲಾಯ್ಡ್ ಡಿಸೋಜ ಕೂಡಾ ಸಮುದ್ರಕ್ಕೆ ಹಾರಿದ್ದು, ಯುವತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಲಾಯ್ಡ್ ಡಿಸೋಜ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.