ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿಲ್, ಉಕ್ರೇನ್ ಮೇಲೆ ಯುದ್ಧವನ್ನು ಘೋಷಿಸಿದ್ದಾರೆ.
ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವಂತೆ ತನ್ನ ಸೇನೆಗೆ ಪುಟಿನ್ ಗುರುವಾರ ಸೂಚನೆ ನೀಡಿದ್ದಾರೆ. ಪುಟಿನ್ ದೂರದರ್ಶನದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸೂಚನೆ ಬೆನ್ನಲ್ಲೇ ರಷ್ಯಾ ಸೇನೆಯು ವೈಮಾನಿಕ ದಾಳಿ ನಡೆಸಿದೆ.
ನಾನು ಮಿಲಿಟರಿ ಕಾರ್ಯಾಚರಣೆಯ ನಿರ್ಧಾರವನ್ನು ಮಾಡಿದ್ದೇನೆ ಎಂದು ಹೇಳಿರುವ ಅವರು, ಈ ವಿಚಾರವಾಗಿ ಯಾರಾದರೂ ಮಧ್ಯಪ್ರವೇಶಿಸಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಉಕ್ರೇನ್ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪುಟಿನ್ ಅವರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಆದರೆ ʻಯಾವುದೇ ಉತ್ತರವಿಲ್ಲ, ಕೇವಲ ಮೌನʼ ಎಂದು ತಿಳಿಸಿದ್ದಾರೆ. ಮಾಸ್ಕೋ ಈಗ ಉಕ್ರೇನ್‌ನ ಗಡಿಯ ಬಳಿ ಸುಮಾರು 2,00,000 ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
ರಷ್ಯಾ ಬಂಡುಕೋರರ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಲು ರಷ್ಯಾ ಮುಂದಾಗಿದೆ. ಆದರೆ ಇದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ನಡುವಿನ ಮಾತುಕತೆಯೂ ವಿಫಲವಾಯಿತು. ಇದಾದ ಬಳಿಕ ಈಗ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ.