ಬೆಳ್ತಂಗಡಿ: ದೆಹಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಬದಲಾಗಿ ಕೇಸರಿ ಧ್ವಜವನ್ನು ಹಾರಿಸುತ್ತೇವೆ ಎಂಬ ದೇಶದ್ರೋಹಿ ಹೇಳಿಕೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪನನ್ನು ಬಂಧಿಸಿ ಜೈಲಿಗಟ್ಟುವ ಬದಲಾಗಿ ಸಂವಿಧಾನಬದ್ಧವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತನ್ನ ಅಭಿಪ್ರಾಯ ಮಂಡಿಸಿದ ಚಲನಚಿತ್ರ ನಟ ಚೇತನ್ ಅಹಿಂಸಾ ಅವರನ್ನು ಸುಳ್ಳು ಕೇಸ್ ನಡಿ ಬಂಧಿಸಿರುವುದು ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ ಎಂದು ದಸಂಸ ಅಂಬೇಡ್ಕರ್ ವಾದ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ಆರೋಪಿಸಿದರು.
ಅವರು ಚಲನಚಿತ್ರ ನಟ ಚೇತನ್ ಅಹಿಂಸಾ ಅವರ ಬಂಧನ ವಿರೋಧಿಸಿ ದಸಂಸ ಅಂಬೇಡ್ಕರ್ ವಾದ ವತಿಯಿಂದ ನಡೆದ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಪ್ರಜಾಪ್ರಭುತ್ವ ದಿನದಂದು ಅಂಬೇಡ್ಕರ್ ಭಾವಚಿತ್ರ ತೆಗೆಯದೆ ಧ್ವಜಾರೋಹಣ ಮಾಡಲ್ಲ ಎಂದ ಬೆಳಗಾವಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲನ ದೇಶದ್ರೋಹಿ ಕೃತ್ಯದ ವಿರುದ್ಧ ಕೇಸ್ ದಾಖಲಿಸದ ರಾಜ್ಯ ಪೋಲಿಸ್ ಇಲಾಖೆ ಚೇತನ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿರುವ ಹಿಂದೆ ದೇಶದ ಸಂವಿಧಾನ , ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು. ಚೇತನ್ ಅವರ ಹೇಳಿಕೆಯನ್ನು ನಾವು ಪುರ್ನಚಿಸುತ್ತೇವೆ , ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದರು.
ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಮಾತನಾಡುತ್ತಾ ಚೇತನ್ ಅಹಿಂಸಾ ಅವರು ಕೇವಲ ಚಲನಚಿತ್ರ ನಟ ಮಾತ್ರವಲ್ಲದೆ ದೇಶದಾದ್ಯಂತ ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳ ವಿರುದ್ಧ ನಡೆಯುವ ನೂರಾರು ಪ್ರತಿಭಟನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ರಾಜ್ಯದಲ್ಲಿಯೂ ದಲಿತ, ಆದಿವಾಸಿ, ರೈತ, ಕಾರ್ಮಿಕರ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಚೇತನ್ ಅವರನ್ನು ಬಂಧಿಸುವ ಮೂಲಕ ಧಮನಿತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿದೆ , ಆದರೆ ಒಬ್ಬ ಹೋರಾಟಗಾರನನ್ನು ಬಂಧಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಮಹಿಳಾ ವಿರೋಧಿಯಾಗಿದ್ದ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ವಿರೋಧಿಸಿದ್ಧ ಏಕೈಕ ಕಾರಣಕ್ಕಾಗಿ ಸಂವಿಧಾನ ವಿರೋಧಿಗಳು ಜೈಲಿಗಟ್ಟಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ವಿರುದ್ಧ ಧ್ವನಿ ಎತ್ತುವವರ ಧ್ವನಿ ಅಡಗಿಸಲು ಕೇಸ್, ಜೈಲು ಶಿಕ್ಷೆ ವಿಧಿಸುವ ಮೂಲಕ ಸರ್ವಾಧಿಕಾರಿ ಆಡಳಿತದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಮುಖಂಡ ವೆಂಕಣ್ಣ ಕೊಯ್ಯೂರು ಮಾತನಾಡಿ ನಟ ಚೇತನ್ ಅವರ ಬಂಧನ ಸಂವಿಧಾನ ವಿರೋಧಿ. ದೇಶದಾದ್ಯಂತ ನಡೆಯುವ ನ್ಯಾಯಪರ ಹೋರಾಟವನ್ನು ಹತ್ತಿಕ್ಕಲು ಹುನ್ನಾರದ ಭಾಗವಾಗಿ ಚೇತನ್ ಬಂಧನ ನಡೆದಿದೆ. ತಕ್ಷಣ ಅವರ ಮೇಲಿನ ಕೇಸ್ ವಾಪಸ್ ಪಡೆದು , ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಮತ್ತೆ ಉಗ್ರ ಸ್ವರೂಪದ ಹೋರಾಟ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಮೂರು ಮಾರ್ಗದ ಮೂಲಕ ಬೆಳ್ತಂಗಡಿ ಮಿನಿ ವಿಧಾನಸೌಧದ ತನಕ ಪಂಜಿನ ಮೆರವಣಿಗೆ ನಡೆದು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮೆರವಣಿಗೆಯಾದ್ಯಂತ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧದ ಘೋಷಣೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಚಾಲಕ ನೇಮಿರಾಜ್ ಕಿಲ್ಲೂರು, ಮೈಸೂರು ವಿಭಾಗ ಸಂ.ಸಂಚಾಲಕ ವಸಂತ ಬಿ.ಕೆ , ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ , ಪ್ರಭಾಕರ ಶಾಂತಿಕೋಡಿ , ಶೇಖರ್ ಕಣಿಯೂರು , ಜನಾರ್ದನ ಸುದೆಮುಗೇರು , ಹರೀಶ್ ಕುಮಾರ್ ಲಾಯಿಲ , ಸತೀಶ್ ಅಳದಂಗಡಿ , ದಿನೇಶ್ ಶಿಬಾಜೆ , ಸತೀಶ್ ನಾವೂರು , ಸಂತೋಷ್ ಮಲೆಬೆಟ್ಟು , ಸದಾನಂದ ನಾಲ್ಕೂರು , ದಿನೇಶ್ ಕುಕ್ಕೇಡಿ , ಸಂದೇಶ್ ಲಾಯಿಲ , ಸೂರಪ್ಪ ಪಡ್ಲಾಡಿ , ಸುರೇಶ್ ಗೇರುಕಟ್ಟೆ , ಹಿರಿಯ ಹೋರಾಟಗಾರ ಹರಿದಾಸ್ ಎಸ್. ಎಂ , ವಿದ್ಯಾರ್ಥಿ ಮುಖಂಡ ಸುಹಾಸ್, ಸಾಮಾಜಿಕ ಕಾರ್ಯಕರ್ತ ವಿಠ್ಠಲ ಪೂಜಾರಿ ಕುಕ್ಕೇಡಿ ಉಪಸ್ಥಿತರಿದ್ದರು.