ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಉದ್ಘಾಟನೆಯು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ರೋವರ್ ಸೌಟ್ ಲೀಡರ್ ಹಾಗೂ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ ಡಾ. ಈಶ್ವರ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ವಿವಿಧ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ಸದಾ ತೊಡಗಿಸಿಕೊಳ್ಳಬೇಕು. ಅದರಿಂದ ಹೊಸ ಹೊಸ ಚಿಂತನೆಗಳನ್ನು ಕಾಣಲು ಸಾಧ್ಯ. ಎಲ್ಲಾ ರೋವರ್ಸ್ ಮತ್ತು ರೇಂಜರ್‌ಗಳು ಲಭ್ಯವಿರುವ ಅವಕಾಶಗಳನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು. ಇಂದಿನ ಯುವಪೀಳಿಗೆಗೆ ಜಗತ್ತಿನಲ್ಲಿ ಒಂದಿಲ್ಲೊಂದು ಅವಕಾಶಗಳು ಇದ್ದೇ ಇವೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲೆ ಜೀವನದ ಯಶಸ್ಸು ಅವಲಂಬಿತವಾಗಿರುತ್ತದೆ. ಬದುಕನ್ನು ಒಂದೇ ಕೆಲಸಕ್ಕೆ ಸೀಮಿತಗೊಳಿಸದೆ ಹೆಚ್ಚೆಚ್ಚು ಅವಕಾಶಗಳನ್ನು ಸದ್ಬಳಕೆ ಮಾಡುವತ್ತ ಗಮನಹರಿಸಬೇಕು. ಅಲ್ಲದೇ ರೋವರ್ಸ್ ಮತ್ತು ರೇಂಜರ್ಸ್ ಘಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ವಿವಿಧ ಉದ್ಯೋಗಾವಕಾಶಗಳು ಮತ್ತು ಸೌಲಭ್ಯಗಳಿವೆ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ, ರೋವರ್ ಸೌಟ್ ಲೀಡರ್ ನಾಗರಾಜ್ ಎನ್ , ರೇಂಜರ್ ಲೀಡರ್ ಚೇತನಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಚಿತ್ತಾರ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಹರ್ಷಿತಾ ಸ್ವಾಗತಿಸಿ ಹರ್ಷಿಣಿ ವಂದಿಸಿದರು.