ಮಂಗಳೂರು: ಪ್ರಾಧ್ಯಾಪಕರೊಬ್ಬರಿಂದ ಮಾನಸಿಕ ಕಿರಿಕಿರಿಯಾಗುತ್ತಿದೆ ಎಂದು ಡೆತ್ ನೋಟ್ ಬರೆದಿಟ್ಟು ಮಂಗಳೂರು ನಗರದ ಕಾಲೇಜಿನ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಮೂಲತಃ ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆ ನಿವಾಸಿ, ನಗರದ ಕರಾವಳಿ ಕಾಲೇಜಿನ ಹೊಟೇಲ್ ಮ್ಯಾನೇಜ್‌ಮೆಂಟ್ ಕಾಲೇಜು ವಿದ್ಯಾರ್ಥಿ ಭರತ್(20) ಎನ್ನಲಾಗಿದೆ.
ಭರತ್ ತಾನು ವಾಸವಾಗಿದ್ದ ಪಿಜಿಯಲ್ಲಿಯೇ ನಿನ್ನೆ ಮಧ್ಯಾಹ್ನ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಕ್ಕಿಂತ ಮೊದಲು ತನ್ನ ತಾಯಿಗೆ ಕರೆ ಮಾಡಿದ್ದಾನೆ. ಆದರೆ ಅವರಿಗೆ ಆ ಕ್ಷಣಕ್ಕೆ ಕರೆ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಭರತ್ ಅವರ ವಾಟ್ಸ್ಆ್ಯಪ್ ನಂಬರ್ ಗೆ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ”ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಾನು ಮಾಡಿರುವ ಪ್ರಾಜೆಕ್ಟ್ ವರ್ಕ್ ಸರಿಯಿಲ್ಲವೆಂದು ಸಹಿ ಮಾಡದೆ ಕಿರಿ ಕಿರಿ ಮಾಡುತ್ತಿದ್ದಾರೆ. ಅಲ್ಲದೆ ಮನಸ್ಸಿಗೆ ನೋವಾಗುವಂತೆ ವರ್ತಿಸುತ್ತಿದ್ದಾರೆ. ಇದೀಗ ತನ್ನನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡುವುದಿಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಆದ್ದರಿಂದ ತಾನು ಈ ಲೋಕವನ್ನು ತ್ಯಜಿಸುತ್ತಿದ್ದೇನೆ” ಸಂದೇಶ ರವಾನಿಸಿದ್ದಾನೆ. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಿಂದ ಆತನ ಪೋಷಕರು ಮಂಗಳೂರಿಗೆ ಆಗಮಿಸಿದ್ದು, ತಮ್ಮ ಮಗನ ಸಾವಿಗೆ ಕಾರಣನಾದ ಪ್ರಾಧ್ಯಾಪಕ ಹಾಗೂ ಕಾಲೇಜು ಅಧ್ಯಕ್ಷರ ಮೇಲೂ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.