ಮೂಡುಬಿದಿರೆ: ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಪಲ್ಟಿಯಾಗುವ ವೇಳೆ ಸ್ಕೂಟರ್‌ಗೆ ಢಿಕ್ಕಿ ಹೊಡೆದು, ಸ್ಕೂಟರ್‌ನಲ್ಲಿದ್ದ ಸಹಸವಾರೆ ಮೃತಪಟ್ಟಿದ್ದಾರೆ.
ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾರ್ನಾಡು ಗ್ರಾಮದ ಗೀತಾ (54) ಮೃತರು.
ಕಾರ್ಕಳದಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಖಾಸಗಿ ಬಸ್ ಬನ್ನಡ್ಕದ ಸೋನ್ಸ್ ಫಾರ್ಮ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದೇ ವೇಳೆ ರಸ್ತೆಬದಿಯಲ್ಲಿ ಸಾಗುತ್ತಿದ್ದ ಸ್ಕೂಟರ್‌ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.
ಸ್ಕೂಟರ್‌ನಲ್ಲಿ ತಮ್ಮ ಸಂಬಂಧಿಕರೊಂದಿಗೆ ಸಹಸವಾರೆಯಾಗಿದ್ದ ಅವರು ತಲೆ ಹಾಗೂ ಕಾಲಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತತ್‌ಕ್ಷಣ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗೀತಾ ಮುಂಬಯಿಯಲ್ಲಿ ನೆಲೆಸಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನಲ್ಲಿದ್ದ ಹಲವು ಪ್ರಯಾಣಿಕರೂ ಗಾಯಗೊಂಡಿದ್ದರು. ಬಸ್‌ನಲ್ಲಿದ್ದ ಸುಮಾರು 16 ಮಂದಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.



























