ಉಡುಪಿ: ದೇಶ ಕಾಯೋ ಯೋಧರಿಗೆ ಪ್ರತಿಯೊಬ್ಬರೂ ಗೌರವ ಸೂಚಿಸಲೇಬೇಕು. ದೇಶ ಸೇವೆಗೆ ಹೋಗುವವರ ಸಂಖ್ಯೆ ತೀರಾ ಕಡಿಮೆ. ಆದರೆ ಉಡುಪಿಯಲ್ಲಿ ಕಳೆದೆರಡು ದಿನಗಳಿಂದಲೂ ಸೇನಾ ನೇಮಕಾತಿ ನಡೆಯುತ್ತಿದೆ. ಸಾವಿರಾರು ಯುವಕರು ಭಾಗಿಯಾಗಿದ್ದಾರೆ. ಆದರೆ ಮೂಲ ಸೌಕರ್ಯಗಳಿಲ್ಲದೇ ಭವಿಷ್ಯದ ಸೈನಿಕರು ರಸ್ತೆಯಲ್ಲಿಯೇ ಮಲಗಿ ನಿದ್ರಿಸುತ್ತಿದ್ದಾರೆ. ಉಡುಪಿಯಲ್ಲಿರುವ ಅಜ್ಜರಕಾಡು ಮೈದಾನದಲ್ಲಿ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿದೆ. ರಾಜ್ಯದ ನಾನಾ ಭಾಗಗಳಿಂದಲೂ 3000 ಕ್ಕೂ ಅಧಿಕ ಮಂದಿ ಯುವಕರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಆದರೆ ಹೀಗೆ ಬಂದ ಯುವಕರಿಗೆ ಜಿಲ್ಲಾಡಳಿತ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಇದರಿಂದಾಗಿ ಕಳೆದೆರಡು ದಿನಗಳಿಂದಲೂ ಯುವಕರು ಪಾರ್ಕ್, ರಸ್ತೆ, ಪುಟ್ ಪಾತ್ ಗಳ ಮೇಲೆಯೇ ಮಲಗಿ ಕತ್ತಲು ಕಳೆಯುತ್ತಿದ್ದಾರೆ. ದೇಶದ ಸೇವೆಯ ಬಗ್ಗೆ ಮಾತನಾಡುವ ರಾಜಕೀಯ ಪಕ್ಷಗಳು ಭವಿಷ್ಯದಲ್ಲಿ ದೇಶ ಸೇವೆಗಾಗೂ ತಮ್ಮನ್ನು ಮುಡಿಪಾಗಿಟ್ಟಿರುವವರಿಗೆ ಕನಿಷ್ಠ ಮೂಲ ಸೌಕರ್ಯದ ವ್ಯವಸ್ಥೆಯನ್ನೂ ಕಲ್ಪಿಸದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಧಾರ್ಮಿಕ, ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುವ ಉಡುಪಿಯಲ್ಲೀಗ ಸೇನಾ ನೇಮಕಾತಿಗೆ ಬಂದವರಿಗೆ ಸರಿಯಾದ ವ್ಯವಸ್ಥೆಯನ್ನು ಮಾಡದಿರುವುದು ಎಷ್ಟು ಸರಿ ಅನ್ನೋ ಕುರಿತು ಚರ್ಚೆಗಳು ನಡೆಯುತ್ತಿದೆ. ಅಷ್ಟೇ ಅಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಸೇನಾ ನೇಮಕಾತಿಗೆ ಬರುವವರಿಗೆ ದೇಗುಲ ಸಭಾಂಗಣಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮೈದಾನದಲ್ಲಿಯೂ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ಯುವಕರು ಒಂದು ದಿನ ಮೊದಲೇ ಬರುವುದರಿಂದ ಬೇಗನೆ ಸರತಿ ಸಾಲಿನಲ್ಲಿ ನಿಲ್ಲುವ ಸಲುವಾಗಿ ಹೀಗೆ ಮಲಗುತ್ತಿದ್ದಾರೆ ಅನ್ನೋದು ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಹೇಳಿಕೆ.