ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ನಡೆಸುವ ‘ಪರೀಕ್ಷಾ ಪೆ ಚರ್ಚಾ’ದ ಮುಂದಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಂದಾಪುರ ತಾಲೂಕಿನ ಅಲ್ಬಾಡಿ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಅನುಷಾ ಆಯ್ಕೆಯಾಗಿದ್ದಾಳೆ. ರಾಜ್ಯದಿಂದ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಈಕೆ ಸೇರಿದ್ದಾಳೆ.
ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ವರ್ಚುವಲ್ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ನಡೆಯುವ ನಾಲ್ಕನೇ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ದಲ್ಲಿ ಪ್ರಧಾನಿ ಅವರು ದೇಶಾದ್ಯಂತದಿಂದ ಭಾಗವಹಿಸುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಶಿಕ್ಷಣದ ಕುರಿತಂತೆ ಸಂವಾದ ನಡೆಸಲಿದ್ದಾರೆ. ನಾಲ್ಕನೇ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು 10.39 ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 14 ಲಕ್ಷ ಮಂದಿ ಶಿಕ್ಷಕರು ಹಾಗೂ ಪೋಷಕರು ಅರ್ಜಿ ಸಲ್ಲಿಸಿದ್ದರು.
ಇವರಲ್ಲಿ ಅಂತಿಮವಾಗಿ 1500 ವಿದ್ಯಾರ್ಥಿಗಳು, ತಲಾ 250 ಶಿಕ್ಷಕರು ಹಾಗೂ ಪೋಷಕರನ್ನು ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಲು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯುವ ಸಂವಾದದಲ್ಲಿ ಪಾಲ್ಗೊಳ್ಳಲು ದೇಶದಾದ್ಯಂತದಿಂದ ಆಯ್ದ 30 ಪ್ರೌಢ ಶಾಲೆಗಳ 30 ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಕರ್ನಾಟಕದ ಎರಡು ಸರಕಾರಿ ಪ್ರೌಢ ಶಾಲೆಗಳ ಇಬ್ಬರು ವಿದ್ಯಾರ್ಥಿಗಳು ಸೇರಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಆರ್ಡಿ ಶಾಲೆಯ ಕನ್ನಡ ಮಾದ್ಯಮ ವಿದ್ಯಾರ್ಥಿನಿ ಅನುಷಾ.
ಇನ್ನೊಬ್ಬ ವಿದ್ಯಾರ್ಥಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಾವರೆಕೆರೆ ಸರಕಾರಿ ಪ್ರೌಢ ಶಾಲೆಯವರು.ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ನಿರ್ದೇಶನದಂತೆ ಜಯರಾಜೇಂದ್ರ ಚೋಳನ್ ಎಂಬವರು ದಿಲ್ಲಿಯಿಂದ ಬಂದು ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಪ್ರೌಢ ಶಾಲೆಯ ಕುರಿತಂತೆ ಕಿರುಚಿತ್ರದ ಶೂಟಿಂಗ್ ನಡೆಸಿದ್ದಾರೆ. ಅಲ್ಲದೇ ಶಾಲೆಯ ಮುಖ್ಯೋಪಾಧ್ಯಾಯರಾದ ಶೇಖರ್ ಶೆಟ್ಟಿಗಾರ್, ಶಾಲೆಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಸಾಯ್ಬರಕಟ್ಟೆ ಹಾಗೂ ವಿದ್ಯಾರ್ಥಿನಿ ಅನುಷಾ ಅವರ ಅಭಿಪ್ರಾಯಗಳನ್ನು ಸಹ ದಾಖಲಿಸಿದ್ದಾರೆ. ಇದನ್ನು ಕಾರ್ಯಕ್ರಮದ ವೇಳೆ ಪ್ರಸಾರ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಗುಡ್ಡೆಯಂಗಡಿ ಕೆಸ್ಕರಜೆಡ್ಡು ನಿವಾಸಿ ಕೃಷ್ಣ ಕುಲಾಲ ಮತ್ತು ಜಯಲಕ್ಷ್ಮೀ ಕೆ. ಕುಲಾಲ ದಂಪತಿಯ ನಾಲ್ವರು ಹೆಣ್ಣು ಮಕ್ಕಳಲ್ಲಿ ಅನುಷಾ ಕಿರಿಯವಳು. ತಂದೆ ಕೃಷ್ಣ ಕುಲಾಲ ಅವರು ಗಾರೆ ಕೆಲಸಗಾರರಾಗಿದ್ದು, ತಾಯಿ ಜಯಲಕ್ಷ್ಮೀ ಗುಡ್ಡೆಯಂಗಡಿಯ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಮೂರನೇಯವರು ಉಡುಪಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದಾರೆ. ಅನುಷಾ ಪ್ರತಿಭಾವಂತೆಯಾಗಿ ಗುರುತಿಸಿಕೊಂಡಿದ್ದು,ಅತ್ಯಂತ ಗ್ರಾಮೀಣ ಭಾಗದ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯೊಬ್ಬಳು ಪ್ರಧಾನ ಮಂತ್ರಿ ಜೊತೆ ನಡೆಯುವ ಸಂವಾದಕ್ಕೆ ಆಯ್ಕೆಯಾಗುವ ಮೂಲಕ ಆರ್ಡಿಗೆ ಕೀರ್ತಿ ತಂದಿದ್ದಾಳೆ. ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ದೂರವಾಣಿ ಮೂಲಕ ಅನುಷಾ ಅವರನ್ನು ಸಂಪರ್ಕಿಸಿ, ಪರೀಕ್ಷಾ ಪೆ ಚರ್ಚಾ ಸಂವಾದನಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿದರು.